ನವದೆಹಲಿ :ಕೋವಿಡ್ ಎರಡನೇ ಅಲೆ ಆರ್ಭಟ ಹಿನ್ನೆಲೆ ರಾಜ್ಯಗಳಲ್ಲಿ ವಿವಿಧ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಈ ಹಿನ್ನೆಲೆ ಆತಂಕ ವ್ಯಕ್ತಪಡಿಸುತ್ತಿರುವ ಚಿಲ್ಲರೆ ವ್ಯಾಪಾರಿಗಳ ಸಂಘವು (RAI) ಈ ಹಂತದಲ್ಲಿ ಆರ್ಥಿಕ ಚಟುವಟಿಕೆ ಮುಚ್ಚುವುದರಿಂದ ವ್ಯವಹಾರಗಳು ಶಾಶ್ವತ ಮುಚ್ಚಲ್ಪಡುತ್ತವೆ ಮತ್ತು ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಹೇಳಿದೆ.
ಚಿಲ್ಲರೆ ಉದ್ಯಮವು ಕಳೆದ ವರ್ಷ ಕೊರೊನಾದಿಂದ ಎದುರಾದ ನಷ್ಟದಿಂದಲೇ ಇನ್ನೂ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಈಗಲೂ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ. ಅನಿವಾರ್ಯವಲ್ಲದ ಅಥವಾ ಆಹಾರೇತರ ಚಿಲ್ಲರೆ ಮತ್ತು ಮಾಲ್ಗಳು ಕಟ್ಟುನಿಟ್ಟಿನ ನಿಯಮಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಬೇಕು ಎಂದು ಮನವಿ ಮಾಡಿಕೊಂಡಿದೆ.