ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ಮಹಾಭಾರತಲ್ಲಿ ಕರ್ಣನ ರಥದ ಚಕ್ರದ ರೀತಿ ಹಲವು ವಲಯಗಳು ಹೂತುಹೋಗಿವೆ. ಈ ಪೈಕಿ ಚಿಲ್ಲರೆ ವಹಿವಾಟು ವಲಯವೂ ಒಂದು. ಚಿಲ್ಲರೆ ವ್ಯಾಪಾರ ವಲಯದಲ್ಲಿ ಪ್ರಗತಿಗೆ ಮಿತಿಯೇ ಇಲ್ಲ ಎಂದು ಹಲವು ಅಧ್ಯಯನಗಳು ಈಗಾಗಲೇ ಸೂಚಿಸಿವೆ. ಆದರೆ, ಸಾಂಕ್ರಾಮಿಕ ರೋಗವು ಈ ವಲಯವನ್ನು ಹದಗೆಡಿಸಿಬಿಟ್ಟಿದೆ.
40 ಸಾವಿರ ವ್ಯಾಪಾರಿಗಳ ಸಂಘಟನೆಯಾಗಿರುವ ಅಖಿಲ ಭಾರತ ವ್ಯಾಪಾರಿಗಳ ಸಂಘಟನೆಯು, ಮೊದಲ 100 ದಿನಗಳ ಲಾಕ್‌ಡೌನ್ ಸಮಯದಲ್ಲಿ 15.5 ಲಕ್ಷ ಕೋಟಿ ನಷ್ಟ ಅನುಭವಿಸಿದ್ದೇವೆ ಎಂದು ಕಳೆದ ವರ್ಷದ ಜುಲೈನಲ್ಲಿ ಹೇಳಿದೆ. ಹಂತ ಹಂತವಾಗಿ ವಹಿವಾಟು ತೆರೆದಿದ್ದು, ಅಂಗಡಿಗಳು ಪುನಃ ತೆರೆದಿದ್ದರೂ, ವ್ಯಾಪಾರವು ಹಿಂದಿನ ಸ್ಥಿತಿಗೆ ವಾಪಸಾಗಬೇಕಿರುವ ಹಿನ್ನೆಲೆಯಲ್ಲಿ ಅನಿಶ್ಚಿತತೆ ಇನ್ನೂ ತಾಂಡವವಾಡುತ್ತಿದೆ.
ಚಿಲ್ಲರೆ ವಲಯವು ಸಮಸ್ಯೆಯನ್ನು ಹಿಮ್ಮೆಟ್ಟಿ ಸುಧಾರಿಸಿಕೊಳ್ಳಲು ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘಟನೆ (ಆರ್‌ಎಐ) ಬೇಡಿಕೆ ಇಟ್ಟಿದೆ. ಮುಂದಿನ ಬಜೆಟ್‌ನಲ್ಲಿ ನೆರವು ಒದಗಿಸುವಂತೆ ಸಂಘಟನೆ ಬೇಡಿಕೆ ಸಲ್ಲಿಸಿದೆ.
ದೇಶದ ಆರ್ಥಿಕತೆಗೆ ಬಳಕೆಯೇ ಬಲ. ಇದನ್ನು ಸಾಧಿಸಲು ಚಿಲ್ಲರೆ ವ್ಯಾಪಾರ ಕ್ಷೇತ್ರವೇ ಅತ್ಯಂತ ಪ್ರಮುಖವಾಗಿದೆ. ಚಿಲ್ಲರೆ ವಹಿವಾಟು ಕ್ಷೇತ್ರಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯಲ್ಲಿನ ಅಡ್ಡಿಯನ್ನು ನಿವಾರಿಸಬೇಕು ಮತ್ತು ಈ ವಲಯದ ಅಭಿವೃದ್ಧಿಗೆ ಅಗತ್ಯ ಹಣಕಾಸು ಲಭ್ಯವಾಗಬೇಕು ಎಂಬ ದೃಷ್ಟಿಯಿಂದ ಆರ್‌ಎಐ ಈ ಬೇಡಿಕೆ ಸಲ್ಲಿಸಿದೆ. ಅಲ್ಲದೆ, ರಾಷ್ಟ್ರೀಯ ಚಿಲ್ಲರೆ ವಹಿವಾಟು ನೀತಿಯನ್ನು ರೂಪಿಸಬೇಕು ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಅದನ್ನು ಜಾರಿ ಮಾಡಬೇಕು ಎಂದೂ ಆರ್‌ಎಐ ಬೇಡಿಕೆ ಸಲ್ಲಿಸಿದೆ.
ಚಿಲ್ಲರೆ ವಹಿವಾಟು ಕ್ಷೇತ್ರಕ್ಕೆ ಎಂಎಸ್‌ಎಂಇ ಮಾನ್ಯತೆ ನೀಡಬೇಕು ಮತ್ತು ಮುದ್ರಾ ಯೋಜನೆ ಅಡಿಯಲ್ಲಿ ಕಿರಾಣಿ ಅಂಗಡಿಗಳ ಡಿಜಿಟಲೀಕರಣಕ್ಕೆ ಹಣಕಾಸು ನೆರವು ಒದಗಿಸಬೇಕು ಎಂದು ಇದು ಆಗ್ರಹಿಸಿದೆ. ಸಮಗ್ರ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿಯನ್ನು ಜಾರಿಗೆ ತಂದರೆ, 2024ರ ವೇಳೆಗೆ ಸುಮಾರು 30 ಲಕ್ಷ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ಅಧ್ಯಯನಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ.