ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಪಿಎಂ ಕೇರ್ಸ್ ಫಂಡ್ ಟ್ರಸ್ಟ್ನಿಂದ 3,100 ಕೋಟಿ ರೂ. ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
PM ಕೇರ್ಸ್ ನಿಧಿಯಿಂದ ವಲಸಿಗ ಕಾರ್ಮಿಕರು, ವೆಂಟಿಲೇಟರ್, ಲಸಿಕೆಗೆ 3,100 ಕೋಟಿ ರೂ. ಮೀಸಲು - ಲಾಕ್ಡೌನ್ ವಲಸಿಗ ಕಾರ್ಮಿಕರು
ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಇನ್ನೊಂದು ಪ್ರತ್ಯೇಕ ಟ್ರಸ್ಟ್ ರಚಿಸುವ ಅಗತ್ಯ ಏನಿತ್ತು ಎಂದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಇದರ ಜೊತೆಗೆ ಪಿಎಂ ಕೇರ್ಸ್ ನಿಧಿ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ ಎಂದು ಕಾಂಗ್ರೆಸ್ನ ಮುಖಂಡರು ಟೀಕಿಸುತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ 3,100 ಕೋಟಿ ರೂ. ಹಣವನ್ನು ಖರ್ಚು ಮಾಡಲು ಪಿಎಂಒ ಪ್ರಕಟಿಸಿದೆ.
ಹಣ
ಒಟ್ಟಾರೆ 3,100 ಕೋಟಿ ರೂ.ಗಳಲ್ಲಿ 2,000 ಕೋಟಿ ರೂ. ವೆಂಟಿಲೇಟರ್‌ಗಳ ಖರೀದಿಗೆ ಮತ್ತು 1,000 ಕೋಟಿ ರೂ. ವಲಸೆ ಕಾರ್ಮಿಕರ ಆರೈಕೆಗಾಗಿ ಮೀಸಲಿಡಲಾಗುವುದು. ಇದರ ಜೊತೆಗೆ ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಗೆ ಸಹಕಾರಿಯಾಗಲು 100 ಕೋಟಿ ರೂ. ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.
ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ ಸ್ಥಾಪಿಸಲಾಗಿದ್ದು, ಇದರ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ. ರಕ್ಷಣಾ, ಗೃಹ ಮತ್ತು ಹಣಕಾಸು ಸಚಿವರು ಟ್ರಸ್ಟ್ನ ಸದಸ್ಯರಾಗಿದ್ದಾರೆ.