ನವದೆಹಲಿ:ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಬೇಡಿಕೆ ಕುಂಠಿತವಾಗಿ ಜಾಗತಿಕ ತೈಲ ಬೆಲೆಗಳು ಕೆಳಮುಖವಾಗಿದ್ದು, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಕುಸಿದಿದೆ.
ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆ ಕ್ರಮವಾಗಿ ಪ್ರತಿ ಲೀಟರ್ ಮೇಲೆ 15 ಮತ್ತು 19 ಪೈಸೆಯಷ್ಟು ಇಳಿಕೆಯಾಗಿದೆ.
ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 81.40 ರೂ ಮತ್ತು ಡೀಸೆಲ್ 72.37 ರೂ.ಗೆ ಮಾರಾಟ ಆಗುತ್ತಿದೆ. ಇಂದಿನ ಕುಸಿತವು ಪೆಟ್ರೋಲ್ ಬೆಲೆಯಲ್ಲಿ ಮೂರನೇ ಮತ್ತು ಡೀಸೆಲ್ ಬೆಲೆಯಲ್ಲಿ ಏಳನೇ ಇಳಿಕೆಯಾಗಿದೆ. ತಿಂಗಳ ಆರಂಭದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರೂ ಡೀಸೆಲ್ ಬೆಲೆ ಸ್ಥಿರವಾಗಿತ್ತು, ಬಳಿಕ ಕುಸಿಯುತ್ತಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ವೆಬ್‌ಸೈಟ್ ಪ್ರಕಾರ, ಪೆಟ್ರೋಲ್ ಬೆಲೆ ಈಗ ಕ್ರಮವಾಗಿ ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಲೀಟರ್‌ಗೆ 81.40, 82.92, 88.07 ಮತ್ತು 84.44 ರೂ.ಗಳಿಗೆ ಇಳಿದಿದೆ. ಅದೇ ಕ್ರಮದಲ್ಲಿ ಈ ಮಹಾನಗರಗಳಲ್ಲಿ ಡೀಸೆಲ್ ಬೆಲೆ 72.37, 75.87, 78.85 ಮತ್ತು 77.73 ರೂ.ಯಷ್ಟಿದೆ.
ಗುರುವಾರದ ಬೆಲೆ ಕಡಿತವು ಪೆಟ್ರೋಲ್ನಲ್ಲಿ 13-15 ಪೈಸೆ ಮತ್ತು ಡೀಸೆಲ್ನಲ್ಲಿ 18-20 ಪೈಸೆ ವ್ಯಾಪ್ತಿಯಲ್ಲಿದೆ. ವಾಹನ ಇಂಧನದ ಚಿಲ್ಲರೆ ಬೆಲೆಯಲ್ಲಿನ ಇತ್ತೀಚಿನ ಬದಲಾವಣೆಗಳು ಜಾಗತಿಕ ಬೆಲೆ ಚಲನೆಗೆ ಅನುಗುಣವಾಗಿರುತ್ತವೆ.