ಹೈದರಾಬಾದ್: ಭೀಕರ ಮಳೆ, ಪ್ರವಾಹದ ಪರಿಣಾಮವಾಗಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಈ ರಾಜ್ಯಗಳಲ್ಲಿ ಈರುಳ್ಳಿ ದರ 100 ರಿಂದ 150 ರೂ.ಗೆ ಏರಿಕೆಯಾಗಿದೆ. ಇದು ಬಡ ಹಾಗೂ ಮಧ್ಯಮ ವರ್ಗದ ಜನರ ಕಣ್ಣಲ್ಲಿ ನೀರು ತರಿಸಿದರೂ ಸಹ ಪ್ರವಾಹದಿಂದಾಗಿ ಬೆಳೆಗಳನ್ನು ಕಳೆದುಕೊಂಡಿರುವ ರೈತರಿಗೆ ಇಷ್ಟೊಂದು ದರದಲ್ಲಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ.
"ಈರುಳ್ಳಿ ಬೆಲೆಯಲ್ಲಿ ಏರಿಕೆ, ಇದು ತಾತ್ಕಾಲಿಕವಾಗಿದೆ. ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ರೈತರ ಬೆಳೆಗಳೆಲ್ಲಾ ನಾಶವಾಗಿದ್ದು, ಇದರ ಪರಿಣಾಮವಾಗಿ ಬೆಲೆ ಏರಿಕೆಯಾಗಿದೆ ಎಂದು" ಮಹಾರಾಷ್ಟ್ರದ ನಾಸಿಕ್ನಲ್ಲಿ ವ್ಯಾಪಾರಿಯೊಬ್ಬರು ಹೇಳುತ್ತಾರೆ. ದೇಶದ ಈರುಳ್ಳಿ ಉತ್ಪನ್ನಗಳಲ್ಲಿ ಶೇ.50 ರಷ್ಟನ್ನು ಮಹಾರಾಷ್ಟ್ರದಲ್ಲೇ ಬೆಳೆಯಲಾಗುತ್ತದೆ.
"ಅತಿವೃಷ್ಠಿಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದೆ. ಹೀಗಾಗಿ ನಾವು ಮಹಾರಾಷ್ಟ್ರದಿಂದ ಕೆ.ಜಿ ಈರುಳ್ಳಿಗೆ 70-80 ರೂಪಾಯಿಯಂತೆ ಆಮದು ಮಾಡಿಕೊಂಡು ಇಲ್ಲಿ 80-90 ರೂಪಾಯಿಗೆ ಮಾರಾಟ ಮಾಡುತ್ತಿದ್ದೇವೆ" ಎಂದು ಶಿವಮೊಗ್ಗದ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳಿದರು.
ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ದಾಸ್ತಾನಿಗೆ ಮಿತಿ ಹೇರಿದೆ. ಸಗಟು ಮಾರಾಟದಾರರು 25 ಮೆಟ್ರಿಕ್ ಟನ್ ವರೆಗೆ ಹಾಗೂ ಚಿಲ್ಲರೆ ಮಾರಾಟಗಾರರು 2 ಟನ್ ತನಕ ಮೆಟ್ರಿಕ್ ಟನ್ ವರೆಗೆ ಮಾತ್ರ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದೆಂದು ಕೇಂದ್ರ ನಿನ್ನೆ ಅಧಿಸೂಚನೆ ಹೊರಡಿಸಿದೆ.