ಬೆಂಗಳೂರು:ರಾಷ್ಟ್ರರಾಜಧಾನಿ ದೆಹಲಿ ಸೇರಿ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಬೆಲೆಯಿಂದಲೇ ಗ್ರಾಹಕರಿಗೆ ಕಣ್ಣೀರು ಹಾಕುವಂತೆ ಮಾಡಿದ್ದ ಈರುಳ್ಳಿ ದರ ಏರಿಕೆಯ ಬಿಸಿ ಬೆಂಗಳೂರಿಗರಿಗೂ ತಟ್ಟಿದೆ.
ಕಳೆದ ತಿಂಗಳಲ್ಲಿನ ಉಂಟಾದ ಪ್ರವಾಹ ಮತ್ತು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಮಂಡಿ ಮಾರುಕಟ್ಟೆಗಳಲ್ಲಿ ದಾಸ್ತಾನು ಪ್ರಮಾಣ ಇಳಿಕೆಯಾಗಿದ್ದು, ಕೆಜಿ ಈರುಳ್ಳಿ 60 ರೂ. ದರದಲ್ಲಿ ಮಾರಾಟ ಕಾಣುತ್ತಿದೆ.
ವಾರಗಳ ಹಿಂದೆಯಷ್ಟೇ ಕೆಜಿ ಈರುಳ್ಳಿ 20 ರೂ. ದರದಲ್ಲಿ ಸಿಗುತ್ತಿತ್ತು. ಮಳೆ ಮತ್ತು ಪೂರೈಕೆಯ ಅಭಾವದಿಂದ ಇಂದು 50- 60 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ. ಸಗಟು ಮಾರುಕಟ್ಟೆಯಲ್ಲೂ ಧಾರಣೆ ಏರಿಕೆಯಾಗಿದ್ದು, ಅನಿವಾರ್ಯವಾಗಿ ನಾವು 60 ರೂ. ಬೆಲೆಗೆ ಮಾರುತ್ತಿದ್ದೇವೆ ಎನ್ನುತ್ತಾರೆ ಕೆ ಆರ್ ಮಾರುಕಟ್ಟೆಯ ವ್ಯಾಪಾರಿ ಇನ್ಯಾಯತ್ಹುಲಾ.
ಬೆಲೆ ಏರಿಕೆಯಿಂದ ಈರುಳ್ಳಿ ಮಾರಾಟ ಕಡಿಮೆಯಾಗುತ್ತಿದೆ. ಈ ಹಿಂದೆ ಎರಡು- ಮೂರು ಕೆ.ಜಿ. ಖರೀದಿಸುತ್ತಿದ್ದವರು ಇಂದು ಕೇವಲ ಒಂದು ಕೆ.ಜಿ ಮಾತ್ರ ಖರೀದಿಸುತ್ತಿದ್ದಾರೆ. 15 ದಿನಗಳ ಹಿಂದೆ ಕೆ.ಜಿ. ಈರುಳ್ಳಿ ಕೇವಲ 20 ರೂ. ಮಾತ್ರವೆ ಇತ್ತು. ಇಂದು 60 ರೂ. ಆಗಿದೆ. ಇದು ಯಾರತಪ್ಪು ಎಂಬುದು ತಿಳಿಯುತ್ತಿಲ್ಲ. ಸರ್ಕಾರದೋ, ರೈತರದೋ ಅಥವಾ ಹವಾಮಾನದೋ ಎಂದು ಅಸಮಾಧಾನ ಹೊರಹಾಕಿದರು.