ನವದೆಹಲಿ: ದೇಶಿ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಿಸಿ ದರ ನಿಯಂತ್ರಿಸಲು ಕೇಂದ್ರ ಸರ್ಕಾರ ಏನೇ ಕಸರತ್ತು ನಡೆಸಿದರೂ ಬೆಲೆ ಇಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಕಳೆದ ಒಂದೂವರೆ ತಿಂಗಳಿಂದ ಗಗನಮುಖಿಯಾಗಿ ಸಾಗುತ್ತಿರುವ ಈರುಳ್ಳಿ ಬೆಲೆ ಕಡಿಮೆ ಆಗುತ್ತಿಲ್ಲ. ವಿದೇಶಗಳಿಂದ ಆಮದು ಪ್ರಗತಿಯಲ್ಲಿ ಇರುವಾಗಲೇ ಕೆಜಿ ಈರುಳ್ಳಿ ಕೆಲವು ಮೆಟ್ರೋ ನಗರಗಳಲ್ಲಿ 150 ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ.
ಮುಂಬೈನಲ್ಲಿ ಕೆಜಿ ಈರುಳ್ಳಿ ₹ 102, ಕೋಲ್ಕತ್ತಾದಲ್ಲಿ ₹ 120, ದೆಹಲಿಯಲ್ಲಿ ₹ 102 ಹಾಗೂ ಚೆನ್ನೈನಲ್ಲಿ ₹ 80ಗೆ ಮಾರಾಟ ಆಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಲಭ್ಯವಿರುವ ತನ್ನಲ್ಲಿನ ದತ್ತಾಂಶಗಳ ಮೂಲಕ ತಿಳಿಸಿದೆ.
ಮೂರ್ನಾಲ್ಕು ದಿನಗಳಲ್ಲಿ 10,560 ಟನ್ನಷ್ಟು ಈರುಳ್ಳಿ ಭಾರತಕ್ಕೆ ಬರಲಿದೆ. ಈಗಾಗಲೇ ಸುಮಾರು 1,160 ಟನ್ ಈರುಳ್ಳಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಕೆಂಪು ಮತ್ತು ಹಳದಿ ಈರುಳ್ಳಿಯನ್ನು ಟರ್ಕಿ, ಈಜಿಫ್ಟ್ ಮತ್ತು ಅಪ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮುಂಬೈ ಬಂದರಿನಲ್ಲಿ ಸಾಗಣೆದಾರರು ಲ್ಯಾಂಡಿಂಗ್ ಆಗಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.