ನವದೆಹಲಿ: ಫೆಬ್ರವರಿ ತಿಂಗಳ ಆರಂಭದಲ್ಲಿ ಸಬ್ಸಿಡಿ ರಹಿತ ಅಡಿಗೆ ಅನಿಲ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ್ದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಸಂಸ್ಥೆ, ಈಗ ಬೆಲೆ ಇಳಿಕೆ ಮಾಡಿದೆ.
ಸೋಮವಾರದಂದು ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ ₹ 53 ಇಳಿಕೆಯಾಗಿದೆ. ಈ ಹಿಂದೆ ಸಿಲಿಂಡರ್ ದರದಲ್ಲಿ ₹ 144.50ಯಷ್ಟು ಏರಿಕೆ ಮಾಡಲಾಗಿತ್ತು. ಇದರ ಜೊತೆಗೆ ವೈಮಾನಿ ಇಂಧನ (ಎಟಿಎಫ್) ದರದಲ್ಲೂ ಶೇ 10ರಷ್ಟು ಇಳಿಕೆಯಾಗಿದೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿಯ ಇಳಿಕೆಯಾಗಿದೆ. ಕೊರೊನಾ ವೈರಸ್ ಹರಡುವಿಕೆಯ ಭೀತಿಯಿಂದಾಗಿ ಅಂತಾರಾಷ್ಟ್ರೀಯ ತೈಲ ದರದಲ್ಲಿ ಇಳಿಕೆಯಾಗಿದೆ. ಬೆಲೆ ಕುಸಿತದ ಪ್ರಯೋಜನವನ್ನು ಆಯಿಲ್ ವಿತರಣಾ ಕಂಪನಿಗಳು ಗ್ರಾಹಕರಿಗೆ ವರ್ಗಾಯಿಸಿವೆ.