ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ದರವನ್ನು ಸತತವಾಗಿ 15 ದಿನಗಳವರೆಗೆ ಹೆಚ್ಚಿಸುವ ತೈಲ ಮಾರುಕಟ್ಟೆ ಕಂಪನಿಗಳ ನಿರ್ಧಾರವು ವ್ಯಾಪಕ ಟೀಕೆಗಳಿಗೆ ಒಳಗಾಯಿತು. ಆದರೆ, ಇದರ ಫಲಾನುಭವವನ್ನು ನಿಜವಾಗಿ ಅನುಭವಿಸಿದ್ದು ಕೇಂದ್ರ ಮತ್ತು ರಾಜ್ಯಗಳು ಎಂಬುದು ಬಹುತೇಕರಿಗೆ ತಿಳಿಯದಿರಬಹುದು.
ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಯನ್ನು ಪರಿಷ್ಕರಿಸುವ ಮುಕ್ತ ಅವಕಾಶ ದೇಶಿಯ ತೈಲ ಮಾರುಕಟ್ಟೆಯ ಕಂಪನಿಗಳಿಗಿದೆ. ಆದರೆ ಈ ಎರಡೂ ಸರಕುಗಳ ಚಿಲ್ಲರೆ ಬೆಲೆಯ ಮೂರನೇ ಒಂದು ಭಾಗ ಮಾತ್ರ ತೈಲ ವಿತರಣಾ ಕಂಪನಿಗಳಿಗೆ ಹೋಗುತ್ತದೆ. ಮೂರನೇ ಎರಡರಷ್ಟು ಸರ್ಕಾರಗಳ ಬೊಕ್ಕಸ ಸೇರುತ್ತದೆ. ಕೇಂದ್ರ ಮತ್ತು ರಾಜ್ಯಗಳು ತೆರಿಗೆಗಳ ರೂಪದಲ್ಲಿ 2019-20ನೇ ಹಣಕಾಸು ವರ್ಷದಲ್ಲಿ 5.5 ಲಕ್ಷ ಕೋಟಿ ರೂ. ಸ್ವೀಕರಿಸಿವೆ.
ಈ ಅವಧಿಯಲ್ಲಿ ತೈಲ ವಲಯದಿಂದ ಗಳಿಸಿದ ಆದಾಯವು ದ್ವಿಗುಣಗೊಂಡಿದ್ದು, ಕೇಂದ್ರವು ಅತಿದೊಡ್ಡ ಆದಾಯದ ಫಲಾನುಭವಿ ಆಗಿದ್ದು, ರಾಜ್ಯಗಳ ಆದಾಯ ಸಂಗ್ರಹವು ಕೇವಲ ಶೇ 38ರಷ್ಟು ಹೆಚ್ಚಾಗಿದೆ.
ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳು ಪೆಟ್ರೋಲಿಯಂ ವಲಯದಿಂದ ಗಳಿಸಿದ ಸಂಚಿತ ಆದಾಯವು 3.33 ಲಕ್ಷ ಕೋಟಿಯಿಂದ 5.55 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2014-15 ಮತ್ತು 2019-20ರ ನಡುವೆ ಶೇ 66ರಷ್ಟು ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯಲ್ಲಿ ಕಡಿಮೆ ಆಗಿದ್ದ ಕಚ್ಚಾ ತೈಲ ಬೆಲೆ, ಕೇಂದ್ರವು ತನ್ನ ಆದಾಯ ಹೆಚ್ಚಿಸಲು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿತು.
ಕೇಂದ್ರ ಸರ್ಕಾರದ ಆದಾಯ ಸಂಗ್ರಹಣೆ ಮತ್ತು ತೈಲ ಕ್ಷೇತ್ರದಿಂದ ಬರುವ ಒಟ್ಟಾರೆ ಆದಾಯವು 2014-15ರಲ್ಲಿ 1.72 ಲಕ್ಷ ಕೋಟಿ ರೂ.ಗಳಿಂದ 2019-20ರ ವೇಳೆಗೆ (ತಾತ್ಕಾಲಿಕ) 3.34 ಲಕ್ಷ ಕೋಟಿ ರೂ.ಯಷ್ಟು ಏರಿಕೆಯಾಗಿದೆ. ಏರಿಕೆಯ ಪ್ರಮಾಣ ಶೇ 94ರಷ್ಟಕ್ಕಿಂತ ಅಧಿಕವಾಗಿದೆ.