ನವದೆಹಲಿ:ದಿನದಿಂದ ದಿನಕ್ಕೆ ದಿನಸಿ ಪದಾರ್ಥ, ಪೆಟ್ರೋಲ್, ಡೀಸೆಲ್ನಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೇ ಈಗ ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಳವಾಗಿದೆ.
ಅಡುಗೆ ಅನಿಲ ಮತ್ತು ಏರ್ ಟರ್ಬಿನಲ್ ತೈಲ (ಎಟಿಎಫ್) ದರದಲ್ಲಿ ಹೆಚ್ಚಳ ಮಾಡಲಾಗಿದೆ. ಸಬ್ಸಿಡಿ ಸಹಿತ 14.2 ಕೆ.ಜಿ. ಎಲ್ಪಿಜಿ ಸಿಲಿಂಡರ್ ದರದಲ್ಲಿ 15 ರೂ. ಹೆಚ್ಚಳ ಮಾಡಲಾಗಿದೆ. ಅಕ್ಟೋಬರ್ನಿಂದ ಈ ಪರಿಷ್ಕೃತ ದರ ಅನ್ವಯವಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆ.ಜಿ. ಸಿಲಿಂಡರ್ ₹ 605ಗೆ ಲಭ್ಯವಾಗುತ್ತಿದೆ.
ಪ್ರತಿ ಕಿಲೋಲೀಟರ್ (ಕೆಎಲ್) ವೈಮಾನಿಕ ಇಂಧನ (ಏರ್ ಟರ್ಬಿನಲ್ ಫ್ಯೂಲ್: ಎಟಿಎಫ್) ದರದಲ್ಲಿ ₹ 1,614.19 ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್ನಲ್ಲಿ ₹ 63,295.48 ದೊರೆಯುತ್ತಿದ್ದ ಎಟಿಎಫ್ ಈಗ ₹ 64,909.69ಕ್ಕೆ ಮಾರಾಟ ಆಗುತ್ತಿದೆ ಎಂದು ಇಂಡಿಯನ್ ಆಯಿಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ತೆರಿಗೆ ನಿಯಮಗಳ ಪ್ರಕಾರ, ಎಲ್ಪಿಜಿ ಮೇಲೆ ಸರಕು ಮತ್ತು ಸೇವೆಗಳ ತೆರಿಗೆ ಇಂಧನದ ಮಾರುಕಟ್ಟೆ ದರದಲ್ಲಿ ಲೆಕ್ಕ ಹಾಕಲಾಗುತ್ತದೆ. ಸರ್ಕಾರದ ಬೆಲೆಗೆ ಒಂದು ಭಾಗವನ್ನು ಸಬ್ಸಿಡಿಯೊಂದಿಗೆ ಆಯ್ಕೆ ಮಾಡಬಹುದು. ಆದರೆ, ಮಾರುಕಟ್ಟೆ ದರದಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇಂಧನ ಮಾರುಕಟ್ಟೆಯ ತೆರಿಗೆ ಮತ್ತು ದರ ಹೆಚ್ಚಳವಾಗಿರುವ ಕಾರಣ ಅಡುಗೆ ಅನಿಲ ಬೆಲೆ ಏರಿಕೆ ಅನಿವಾರ್ಯವಾಗಿದೆ.