ಮುಂಬೈ: ಉಕ್ರೇನ್ ಮೇಲೆ ರಷ್ಯಾ ಕಳೆದೊಂದು ವಾರದಿಂದ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಈ ಬೆಳವಣಿಗೆ ಜಾಗತಿಕ ಷೇರು ಮಾರುಕಟ್ಟೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ.
ಪರಿಣಾಮ, ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿದೆ. ಇದರ ನಡುವೆಯೇ ಭಾರತೀಯ ಜೀವ ವಿಮಾ ನಿಗಮ ತನ್ನ ಬಹುನಿರೀಕ್ಷಿತ ಐಪಿಒ ಪ್ರಕ್ರಿಯೆಯನ್ನು ಮುಂದೂಡುವ ಸಾಧ್ಯತೆ ಕಾಣುತ್ತಿದೆ ಎಂದು ನ್ಯೂಸ್ ಏಜೆನ್ಸಿ ಪಿಟಿಐ ವರದಿ ಮಾಡಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.
ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಷೇರುಪೇಟೆಗೆ ಬರಲು ಸರ್ಕಾರಿ ಒಡೆತನದ ಎಲ್‌ಐಸಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ರಷ್ಯಾ-ಉಕ್ರೇನ್ ಭೀಕರ ಯುದ್ಧದ ಕಾರಣದಿಂದ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಬೃಹತ್ ಏರಿಳಿತಗಳು ಉಂಟಾಗುತ್ತಿವೆ. ವಿದೇಶಿ ಹೊರ ಹರಿವು ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ಗರಿಷ್ಠ ಮಟ್ಟದ ಮಾರುಕಟ್ಟೆ ಮೌಲ್ಯ ಪಡೆಯಲು ಎದುರು ನೋಡುತ್ತಿದ್ದ ಎಲ್‌ಐಸಿ ಸದ್ಯದ ಮಟ್ಟಿಗೆ ಐಪಿಒ ಮುಂದೂಡಲಿದೆ ಎನ್ನಲಾಗಿದೆ.
ಮಾರ್ಚ್‌ನಲ್ಲಿ LIC IPO ಬಿಡುಗಡೆ ಏಕೆ ಮುಖ್ಯ?ಪ್ರಸಕ್ತ ಹಣಕಾಸು ವರ್ಷದಲ್ಲಿ ಜೀವ ವಿಮಾ ನಿಗಮದಲ್ಲಿನ ಶೇ 5ರಷ್ಟು ಪಾಲನ್ನು ಮಾರಾಟ ಮಾಡುವ ಮೂಲಕ 63,000 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದರಿಂದ 78,000 ಕೋಟಿ ರೂಪಾಯಿಗಳ ಹೂಡಿಕೆ ಹಿಂತೆಗೆತ ಗುರಿ ಪೂರೈಸಲು ಸರ್ಕಾರ ಮುಂದಾಗಿದೆ. ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಮುಂದಿನ ಹಣಕಾಸು ವರ್ಷಕ್ಕೆ ಮುಂದೂಡಿದರೆ, ಸರ್ಕಾರವು ಪರಿಷ್ಕೃತ ಹೂಡಿಕೆಯ ಗುರಿಯನ್ನು ಭಾರಿ ಅಂತರದಿಂದ ಕಳೆದುಕೊಳ್ಳುತ್ತದೆ.
ಇದನ್ನೂ ಓದಿ:ಎಲ್‌ಐಸಿ ಐಪಿಒ: ಪಾಲಿಸಿದಾರರು ಹೂಡಿಕೆಗೂ ಮುನ್ನ ತಿಳಿಯಬೇಕಾದ ವಿಷಯಗಳಿವು...