ಕರ್ನಾಟಕ

karnataka

ETV Bharat / business

ಲಾಕ್‌ಡೌನ್‌ನಲ್ಲೂ ಹೂಡಿಕೆದಾರರಿಗೆ ಕರ್ನಾಟಕವೇ ಅಚ್ಚುಮೆಚ್ಚಿನ ತಾಣ - ರಾಜ್ಯಕ್ಕೆ ಹರಿದು ಬಂದ ಬಂಡವಾಳ ಎಷ್ಟು?

ಕೋವಿಡ್ ಮೊದಲ ವರ್ಷವಾದ 2020-21ನೇ ಸಾಲಿನಲ್ಲಿ 316 ವಿವಿಧ ಯೋಜನೆಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ರಾಜ್ಯದಲ್ಲಿ ಅನುಮೋದನೆ ನೀಡಲಾಗಿದೆ. ಪರಿಣಾಮ, ರಾಜ್ಯದಲ್ಲಿ ಬರೋಬ್ಬರಿ 52,734.72 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯಾಗಿದೆ. ಇದರಿಂದ 1,11,603 ಮಂದಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.

Karnataka is favorite destination for investors in pandemic time also
ಲಾಕ್‌ಡೌನ್‌ನಲ್ಲೂ ಹೂಡಿಕೆದಾರರಿಗೆ ಕರ್ನಾಟಕವೇ ಅಚ್ಚುಮೆಚ್ಚಿನ ತಾಣ; ರಾಜ್ಯಕ್ಕೆ ಹರಿದು ಬಂದ ಬಂಡವಾಳ ಇಷ್ಟು..

By

Published : Nov 6, 2021, 7:22 PM IST

ಬೆಂಗಳೂರು:ಕೊರೊನಾ ಲಾಕ್‌ಡೌನ್ ಇಡೀ ಕರುನಾಡನ್ನು ತಲ್ಲಣಗೊಳಿಸಿತ್ತು. ಸತತ ಎರಡು ವರ್ಷಗಳ ಕೋವಿಡ್-ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದೆ. ಆದರೂ ಹೂಡಿಕೆದಾರರಿಗೆ ಕರ್ನಾಟಕವೇ ಈಗಲೂ ನೆಚ್ಚಿನ ತಾಣವಾಗಿಯೇ ಉಳಿದಿದೆ.

ಕೋವಿಡ್ ಲಾಕ್‌ಡೌನ್ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಪೆಟ್ಟು ನೀಡಿತ್ತು. ನಿರ್ಬಂಧಗಳಿಂದ ಹಲವು ಕೈಗಾರಿಕೆಗಳು ಬಾಗಿಲು ಮುಚ್ಚಿವೆ. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಆದರೆ, ಕೊರೊನಾ ಅಬ್ಬರ, ಲಾಕ್‌ಡೌನ್‌ಗಳ ಹೊರತಾಗಿಯೂ ಕರ್ನಾಟಕ ಕೈಗಾರಿಕೋದ್ಯಮಿಗಳಿಗೆ ನೆಚ್ಚಿನ ತಾಣವಾಗಿ ಹೊರ ಹೊಮ್ಮಿದೆ.

ಹೂಡಿಕೆಗೆ ಕರುನಾಡೇ ಅಚ್ಚುಮೆಚ್ಚು:

ಕೋವಿಡ್-ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದರೂ, ಕರುನಾಡು ಹೂಡಿಕೆದಾರರ ನೆಚ್ಚಿನ ತಾಣವಾಗಿನೇ ಉಳಿದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಹರಿದು ಬರುತ್ತಿರುವ ಹೂಡಿಕೆ‌‌‌ ಪ್ರಮಾಣದಲ್ಲಿ ಏರಿಕೆ ಕಾಣುತ್ತಲೇ ಇದೆ. ಬೃಹತ್ ಕೈಗಾರಿಕೆ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ ರಾಜ್ಯದಲ್ಲಿ ಹೂಡಿಕೆ ಪ್ರಮಾಣ ಏರುಗತಿಯಲ್ಲಿದೆ.

2021-22 ಸಾಲಿನಲ್ಲಿ ಈವರೆಗೆ 128 ವಿವಿಧ ಯೋಜನೆಗಳ ಹೂಡಿಕೆಗಳಿಗೆ ಅನುಮೋದನೆ ನೀಡಲಾಗಿದೆ. ಸುಮಾರು 18,357.76 ಕೋಟಿ ರೂ.‌ಮೊತ್ತದ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಈ ಪೈಕಿ ಲಾಕ್‌ಡೌನ್ ಸಂದರ್ಭದವಾದ ಏಪ್ರಿಲ್‌, ಮೇ ಹಾಗೂ ಜೂನ್ ಮೊದಲ ವಾರದಲ್ಲೇ ರಾಜ್ಯಕ್ಕೆ ಬರೋಬ್ಬರಿ 18,152.96 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಹರಿದು ಬಂದಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ಇನ್ನಷ್ಟು ಹೆಚ್ಚಿನ ಬಂಡವಾಳ ಹೂಡಿಕೆ ಬರಲಿದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಕ್ಕೆ ಹರಿದು ಬಂದ ಬಂಡವಾಳದ ಅಂಕಿಅಂಶ

52,734.72 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ

2019-20ರಲ್ಲಿ ಕರ್ನಾಟಕಕ್ಕೆ 187 ವಿವಿಧ ಯೋಜನೆಗಳ ಹೂಡಿಕೆ ಪ್ರಸ್ತಾಪಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಆ ಮೂಲಕ ಸುಮಾರು 30,331.63 ಕೋಟಿ ರೂ.‌ ಮೊತ್ತದ ಬಂಡವಾಳ ರಾಜ್ಯಕ್ಕೆ ಅರಸಿ ಬಂದಿತ್ತು. ಇನ್ನು, ಕೋವಿಡ್ ಮೊದಲ ವರ್ಷವಾದ 2020-21ನೇ ಸಾಲಿನಲ್ಲಿ 316 ವಿವಿಧ ಯೋಜನೆಗಳ ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಬರೋಬ್ಬರಿ 52,734.72 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯಾಗಿದೆ.

ಪ್ರಮುಖವಾಗಿ ಜಿಂದಾಲ್ ಸಂಸ್ಥೆ, ಶ್ರೀ ಸಿಮೆಂಟ್, ಗ್ರಾಸಿಂ ಇಂಡಸ್ಟ್ರೀಸ್, ಮೈಲಾರ್ ಶುಗರ್ಸ್, ಆಹಾರ ಸಂಸ್ಕರಣಾ ಘಟಕಗಳು, ಉತ್ಪಾದನಾ ವಲಯದ ಕೈಗಾರಿಕೆಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಬೆಂಗಳೂರು ಸಹಜವಾಗಿ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಉಳಿದಂತೆ ಟಯರ್ 2 ಹಾಗೂ ಟಯರ್ 3 ನಗರಳಲ್ಲೂ ಹೂಡಿಕೆ ಮಾಡಲು ಹಲವು ಕಂಪನಿಗಳು ಮುಂದೆ ಬಂದಿವೆ ಎಂದು ಕೈಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿಯಾಗುತ್ತಾ?

ಉದ್ಯೋಗ ಸೃಷ್ಟಿಯಲ್ಲೂ ಕರ್ನಾಟಕ ಹಿಂದೆ ಬಿದ್ದಿಲ್ಲ. ಕೊರೊನಾ ಲಾಕ್‌ಡೌನ್‌ ಮಧ್ಯೆಯೂ ಉದ್ಯೋಗ ಸೃಷ್ಟಿಗೆ ಯಾವುದೇ ಹಿನ್ನಡೆಯಾಗಿಲ್ಲ. ಕೈಗಾರಿಕಾ ಇಲಾಖೆ ನೀಡಿರುವ ಅಂಕಿ ಅಂಶದಂತೆ ರಾಜ್ಯದಲ್ಲಿ 2019-20 ಸಾಲಿನ ಅನುಮೋದಿತ ಬಂಡವಾಳ ಹೂಡಿಕೆಯ ವಿವಿಧ ಯೋಜನೆಗಳಿಂದ 99,494 ಉದ್ಯೋಗ ಸೃಷ್ಟಿ ಯಾಗಿವೆ. ಅದೇ 2020-21ರಲ್ಲಿ ಅನುಮೋದಿತ 316 ಬಂಡವಾಳ ಯೋಜನೆಗಳಲ್ಲಿ 1,11,603 ಮಂದಿಗೆ ಉದ್ಯೋಗ, 2021-22 ಸಾಲಿನಲ್ಲಿ ಈವರೆಗೆ ಅನುಮೋದನೆಗೊಂಡ 128 ಯೋಜನೆಗಳ ಮೂಲಕ 24,853 ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ABOUT THE AUTHOR

...view details