ಮುಂಬೈ:ಚಿನ್ನಾಭರಣಗಳ ಖರೀದಿಗೆ ಶುಭ ದಿನವಾದ ಧನ್ತೇರಸ್ ವೇಳೆ ದೇಶದಾದ್ಯಂತ ಈ ಬಾರಿ ಗ್ರಾಹಕರಲ್ಲಿ ಹೆಚ್ಚಿನ ಖರೀದಿ ಸಂಭ್ರಮ ಕಂಡುಬರಲಿದೆ ಎಂಬ ನಿರೀಕ್ಷೆಯನ್ನು ಚಿನ್ನಾಭರಣ ವರ್ತಕರು ಇರಿಸಿಕೊಂಡಿದ್ದಾರೆ.
ಜ್ಯುವೆಲ್ಲರ್ಸ್ ಚೇತರಿಕೆಯು ಆರ್ಥಿಕತೆಯ ಚೇತರಿಕೆಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ಈ 'ಧನ್ತೇರಸ್' ವಹಿವಾಟು ನೆರವಾಗಲಿದೆ. ಚಿನ್ನಾಭರಣ ಉದ್ಯಮವು ಕಳೆದ ವರ್ಷದ ವ್ಯವಹಾರಕ್ಕಿಂತ ಶೇ 70ರಷ್ಟು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ.
ಹೆಚ್ಚಿನ ಚಿನ್ನದ ಬೆಲೆಗಳ ಏರಿಳಿತ, ಪ್ರಸ್ತುತದ ಕೋವಿಡ್-19 ಅನಿಶ್ಚಿತತೆಗಳ ಹೊರತಾಗಿಯೂ ಈ ಹಬ್ಬದ ಋತುವಿನಲ್ಲಿ ಚಿಲ್ಲರೆ ಮಾರಾಟದಲ್ಲಿ ಪುನರುಜ್ಜೀವನ ಕಾಣಬಹುದು ಎಂಬುದು ಆಭರಣಕಾರರ ನಿರೀಕ್ಷೆ. ಹಳದಿ ಲೋಹವು ಭಾರತದ ಹಬ್ಬಗಳ ಅವಧಿಯಲ್ಲಿ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಧನ್ತೇರಸ್, ದೀಪಾವಳಿ ಮತ್ತು ವಿವಾಹದ ಸೀಸನ್ನಲ್ಲಿ ವ್ಯಾಪಕ ಖರೀದಿ ಕಂಡುಬರುತ್ತದೆ.
ಹಬ್ಬದ ಸೀಸನ್ ಆರಂಭದಿಂದಲೂ ಮಾರಾಟದಲ್ಲಿ ಕ್ರಮೇಣ ಬೆಳವಣಿಗೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಕೋವಿಡ್ ಕುರಿತು ನಡೆಯುತ್ತಿರುವ ಅನಿಶ್ಚಿತತೆಗಳ ಹೊರತಾಗಿಯೂ ವೃದ್ಧಿ ಕಾಣುತ್ತಿದೆ. ಇದು ನಮಗೆ ಭರವಸೆಯ ಆಶಾಕಿರಣವಾಗಿದ್ದು, ಕಳೆದ ವರ್ಷಕ್ಕಿಂತ ಶೇ 70ರಷ್ಟು ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಮೂಡಿಸಿದೆ ಎಂದು ಆಲ್ ಇಂಡಿಯ ಜೆಮ್ಸ್ & ಜ್ಯುವೆಲ್ಲರಿ ಟ್ರೇಡ್ ಫೆಡರೇಷನ್ (ಜಿಜೆಎಫ್) ಅಧ್ಯಕ್ಷ ಅನಂತ ಪದ್ಮನಾಭನ್ ಪಿಟಿಐಗೆ ತಿಳಿಸಿದರು.
ದೇಶದಲ್ಲಿ ಪ್ರತಿ 10 ಗ್ರಾಂ. ಚಿನ್ನ 52,000 ರೂ. ಬೆಲೆಗೆ ಮಾರಾಟ ಆಗುತ್ತಿದೆ. ಧನ್ತೇರಸ್ ಶುಭ ಸಂದರ್ಭದಲ್ಲಿ ಚಿನ್ನ ಖರೀದಿಸಿದರೆ ಅದೃಷ್ಟ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಲಕ್ಷಾಂತರ ಭಾರತೀಯರು ನಂಬಿಕೆ. ಈ ಮನೋಭಾವದ ಪ್ರತಿಬಿಂಬಕವಾಗಿ ಈ ವರ್ಷ ಸಾಧಾರಣ ಖರೀದಿ ಅವಧಿಯ ಪ್ರಾರಂಭ ಚಿಹ್ನೆಗಳಿವೆ. ಇದು ಪ್ರಸ್ತುತ ಸಾಂಕ್ರಾಮಿಕದ ದೀರ್ಘಕಾಲದ ನಿಗ್ರಹಿತ ಬೇಡಿಕೆ ಮತ್ತು ಚಟುವಟಿಕೆಗೆ ಸ್ವಲ್ಪ ವಿರಾಮ ನೀಡುತ್ತದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ವ್ಯವಸ್ಥಾಪಕ ನಿರ್ದೇಶಕ ಪಿಆರ್ ಸೋಮಸುಂದರಾಮ್ ಹೇಳಿದರು.