ನವದೆಹಲಿ :ಈಕ್ವಿಟಿ ಮಾರುಕಟ್ಟೆ ಎರಡು ತಿಂಗಳಲ್ಲಿ ಅತಿದೊಡ್ಡ ಏಕದಿನ ಕುಸಿತ ದಾಖಲಿಸಿದ್ದರಿಂದ ಹೂಡಿಕೆದಾರರು 3.7 ಲಕ್ಷ ಕೋಟಿ ರೂ.ಯಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.
ದುರ್ಬಲ ಜಾಗತಿಕ ಸೂಚನೆಗಳು, ಹೆಚ್ಚುತ್ತಿರುವ ಬಾಂಡ್ ಇಳುವರಿ ಮತ್ತು ಕೋವಿಡ್-19 ಲಾಕ್‌ಡೌನ್ ಭಯದಿಂದಾಗಿ ಸತತ ಐದನೇ ವಹಿವಾಟು ನೆಗೆಟಿವ್ನಲ್ಲಿ ಕೊನೆಗೊಂಡಿತು.
ವಹಿವಾಟಿನ ಮುಕ್ತಾಯದ ವೇಳೆಗೆ ಬಿಎಸ್‌ಇ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು 3,71,883.82 ಕೋಟಿ ರೂ.ಯಿಂದ ಕುಸಿದು 2,00,26,498.14 ಕೋಟಿ ರೂ.ಗೆ ತಲುಪಿದೆ. ಫೆಬ್ರವರಿ 19ರಂದು ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ 2,03,98,381.96 ಕೋಟಿ ರೂ.ಯಷ್ಟಿತ್ತು.
ದಿನದ ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ 1145.44 ಅಂಕ ಕ್ಷೀಣಿಸಿ 49744.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 306.05 ಅಂಕ ಇಳಿಕೆಯಾಗಿ 14675.70 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಇದನ್ನೂ ಓದಿ: ಹೆಚ್ಚಿದ ಚಿಲ್ಲರೆ ಒತ್ತಡ: ಬ್ಯಾಂಕಿಂಗ್ ಕ್ಷೇತ್ರವನ್ನು ನೆಗೆಟಿವ್ನಿಂದ ಸ್ಥಿರಕ್ಕೆ ಪರಿಷ್ಕರಿಸಿದ ಇಂಡಿಯಾ ರೇಟಿಂಗ್ಸ್
ಒಎನ್‌ಜಿಸಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮಾತ್ರವೇ ಶೇ.1ರಷ್ಟು ಏರಿಕೆಯಾಗಿವೆ. ಹಿಂದೂಸ್ತಾನ ಯೂನಿಲಿವರ್, ಅಲ್ಟ್ರಾಟೆಕ್, ಏಷ್ಯಾನ್ ಪೇಯಿಂಟ್ಸ್, ಬಜಾಜ್ ಆಟೋ, ಟೈಟನ್ ನೆಸ್ಲೆ, ಐಟಿಸಿ, ಇನ್ಫಿ, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ಸರ್ವ್, ಎನ್ಟಿಪಿಸಿ ದಿನದ ಟಾಪ್ ಲೂಸರ್ಗಳಾದರು.
ನಿಫ್ಟಿಯಲ್ಲಿ ರಿಯಾಲ್ಟಿ, ಪಿಎಸ್‌ಯು ಬ್ಯಾಂಕ್, ಫಾರ್ಮಾ, ಐಟಿ ಮತ್ತು ಮೀಡಿಯಾ ಸೂಚ್ಯಂಕಗಳು ಶೇ.3ರಷ್ಟು ಕುಸಿದಿದ್ದರೆ, ಖಾಸಗಿ ಬ್ಯಾಂಕ್, ಎಫ್‌ಎಂಸಿಜಿ, ಹಣಕಾಸು ಸೇವೆ ಮತ್ತು ಬ್ಯಾಂಕ್ಗಳ ಸೂಚ್ಯಂಕವು ಶೇ.2ರಷ್ಟು ಇಳಿಕೆಯಾದವು.