ನವದೆಹಲಿ:ಸ್ವಾತಂತ್ರ್ಯ ದಿನದ ಬಳಿಕದ ಷೇರು ಪೇಟೆಯ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಏರಿಕೆ ದಾಖಲಿಸಿದೆ. ಇದರಿಂದ ಹೂಡಿಕೆದಾರರು ಲಕ್ಷಾಂತರ ಕೋಟಿ ರೂ. ಸಂಪತ್ತು ಜೇಬಿಗೆ ಇಳಿಸಿಕೊಂಡಿದ್ದಾರೆ.
ಷೇರು ಮಾರುಕಟ್ಟೆಯ ಎರಡು ದಿನಗಳ ಲಾಭದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು 2.71 ಲಕ್ಷ ಕೋಟಿ ರೂ.ಯಷ್ಟು ವೃದ್ಧಿಯಾಗಿದೆ. ಇಂದು 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 477.54 ಅಂಕ ಅಥವಾ ಶೇ 1.26ರಷ್ಟು ಏರಿಕೆ ಕಂಡು 38,528.32 ಅಂಕ ತಲುಪಿದೆ.
ಹೂಡಿಕೆದಾರರ ಖರೀದಿಯಲ್ಲಿ ಉತ್ಸಾಹ ಕಂಡಬಂದ ನಂತರ ಬಿಎಸ್‌ಇ-ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳ 1,54,11,199 ಕೋಟಿ ರೂ.ಯಿಂದ 2,71,541 ಕೋಟಿ ರೂ.ಗೆ ತಲುಪಿದೆ.
ಅಮೆರಿಕ-ಚೀನಾ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಉತ್ತೇಜಕ ಪ್ಯಾಕೇಜ್ನ ಅನಿಶ್ಚಿತತೆಗಳು ಜಾಗತಿಕ ಮಾರುಕಟ್ಟೆಗಳನ್ನು ಅಂಚಿಗೆ ನೂಕಿವೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಭಾರತದಲ್ಲಿನ ಲಾಕ್‌ಡೌನ್ ಪರಿಣಾಮ ಸರಿದೂಗಿಸಲು ಸರ್ಕಾರದ ಖರ್ಚಿನ ನಿರೀಕ್ಷೆಯಲ್ಲಿ ಹೂಡಿಕೆದಾರರಿಗೆ ಅಲ್ಪ ಸಾಂತ್ವನ ಸಿಕ್ಕಿದೆ. ವ್ಯಾಪಕವಾಗಿ ಸುರಿಯುತ್ತಿರುವ ಮಾನ್ಸೂನ್ ಮಳೆ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬರುತ್ತಿರುವುದು ಹೂಡಿಕೆದಾರರ ಭಾವನೆಗಳು ಸಕರಾತ್ಮಕತೆಯಡೆಗೆ ತಿರುಗಿದೆ. ಇಂದಿನ ಲಾಭದ ವಹಿವಾಟನ್ನು ಬ್ಯಾಂಕಿಂಗ್ ವಲಯದ ಸೂಚ್ಯಂಕಗಳು ಮುನ್ನಡಿಸಿದವು ಎಂದು ವಿಶ್ಲೇಷಿಸಿದರು.
ಶನಿವಾರ ಮತ್ತು ಭಾನುವಾರ ಹೊರತುಪಡಿಸಿ (ಸರ್ಕಾರದ ರಜಾ ದಿನಗಳು) ಉಳಿದ ದಿನಗಳಲ್ಲಿ ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರ ವರೆಗೆ ಷೇರುಪೇಟೆ ವಹಿವಾಟು ನಡೆಯುತ್ತದೆ (ದಿನದಲ್ಲಿ 6 ಗಂಟೆ 25 ನಿಮಿಷ).