ನವದೆಹಲಿ: ಭಾರತದಿಂದ ಅತಿಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಈರುಳ್ಳಿ ಮೇಲಿನ ನಿಷೇಧದಿಂದ ಏಷ್ಯಾ ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು, ಕಟ್ಮಂಡುವಿನಿಂದ ಕೊಲಂಬೊವರೆಗೂ ಉಳ್ಳಾಗಡ್ಡಿ ಅಭಾವ ತಲೆದೂರಿದೆ.
ಮಹಾರಾಷ್ಟ್ರ, ಕರ್ನಾಟಕ, ಬಿಹಾರ್, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಿಂದ ಈರುಳ್ಳಿ ಉತ್ಪನ್ನದ ಪ್ರಮಾಣ ಇಳಿಕೆಯಾಗಿದೆ. ಕಳೆದ ಒಂದು ತಿಂಗಳಲ್ಲಿ ಉಳ್ಳಾಗಡ್ಡಿ ದರ ದ್ವಿಗುಣಗೊಂಡಿದ್ದು, ಭಾರತದ ಸಾಂಬಾರ್, ನೆರೆಯ ಪಾಕಿಸ್ತಾನದ ಚಿಕನ್ ಕರಿಗೆ, ಬಾಂಗ್ಲಾದ ಬಿರಿಯಾನಿಗೆ ಈರುಳ್ಳಿ ಇಲ್ಲದಂತಾಗಿದೆ.
ಕಳೆದ ಭಾನುವಾರ 100 ಕೆ.ಜಿ.ಯ ಈರುಳ್ಳಿ ಬೆಲೆಯು 4,500 ರೂ. ಏರಿದ ನಂತರ ಭಾರತದಿಂದ ಎಲ್ಲ ವಿಧದ ಉಳ್ಳಾಗಡ್ಡಿ ರಫ್ತನ್ನು ನಿಷೇಧಿಸಿತ್ತು. ಇದು ಸುಮಾರು ಆರು ವರ್ಷಗಳಲ್ಲಿನ ಗರಿಷ್ಠ ದರವಾಗಿದೆ. ಬೇಸಿಗೆಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ಇತ್ತೀಚೆಗೆ ಉಂಟಾಗಿದ್ದ ಪ್ರವಾಹದಿಂದ ಎಪಿಎಂಸಿಗಳಿಗೆ ನಿರೀಕ್ಷಿತ ಪ್ರಮಾಣದ ಆವಕದಲ್ಲಿ ಗಣನೀಯವಾಗಿ ಕುಸಿತಕಂಡಿದೆ. ಪರಿಣಾಮ ಬೆಲೆಯು ಗಗನಮುಖಿಯಾಗಿದೆ.
ಭಾರತ ಉಳ್ಳಾಗಡ್ಡಿ ರಫ್ತು ಮೇಲೆ ನಿಷೇಧ ವಿಧಿಸಿದ ನಂತರ ಬಾಂಗ್ಲಾದೇಶ, ಪಾಕಿಸ್ತಾನದಂತಹ ಈರುಳ್ಳಿ ಆಮದು ರಾಷ್ಟ್ರಗಳು ಮ್ಯಾನ್ಮಾರ್, ಈಜಿಪ್ಟ್, ಟರ್ಕಿ ಮತ್ತು ಚೀನಾ ದೇಶಗಳತ್ತ ಮುಖ ಮಾಡಿವೆ. ತಮ್ಮ ರಾಷ್ಟ್ರಗಳಲ್ಲಿ ಸರಬರಾಜು ಹೆಚ್ಚಿಸಲು ಹಾಗೂ ಬೆಲೆಯನ್ನು ನಿಯಂತ್ರಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.