ನವದೆಹಲಿ:ಈ ಖಾರಿಫ್ ಮಾರುಕಟ್ಟೆ ಅವಧಿಯಲ್ಲಿ ಎಂಎಸ್‌ಪಿಯಡಿ ಸುಮಾರು 68 ಲಕ್ಷ ರೈತರಿಂದ 98,457 ಕೋಟಿ ರೂ. ವೆಚ್ಚದಲ್ಲಿ ಕೇಂದ್ರವು ಈವರೆಗೆ 521.48 ಲಕ್ಷ ಟನ್ ಭತ್ತ ಸಂಗ್ರಹಿಸಿದೆ.
ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ನಡೆಸುತ್ತಿರುವ ಪ್ರತಿಭಟನೆಯ ಮಧ್ಯೆ ಎಂಎಸ್ಪಿ ಭರವಸೆಯಡಿ ಸರ್ಕಾರದ ಖರೀದಿ ಪ್ರಕ್ರಿಯೆ ಮುಂದುವರಿಸಿದೆ.
ಪ್ರಸ್ತುತ ಖಾರಿಫ್ ಮಾರುಕಟ್ಟೆ ಅವಧಿಯ (ಕೆಎಂಎಸ್) 2020-21ರಲ್ಲಿ ಸರ್ಕಾರವು ಈಗಿನ ಎಂಎಸ್ಸಿ ಯೋಜನೆಗಳ ಪ್ರಕಾರ ರೈತರಿಂದ ಖಾರಿಫ್ ಬೆಳೆಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಭತ್ತದ ಸಂಗ್ರಹವು ಜನವರಿ 6ರವರೆಗೆ 521.48 ಲಕ್ಷ ಟನ್ ತಲುಪಿದೆ. ಇದು ಹಿಂದಿನ ವರ್ಷದ ಅವಧಿಗೆ ಹೋಲಿಸಿದರೆ ಶೇ 27.13ರಷ್ಟು ಹೆಚ್ಚಾಗಿದೆ. ಖಾರಿಫ್ ಮಾರುಕಟ್ಟೆ ಋತುಮಾನವು ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ. ಸುಮಾರು 67.89 ಲಕ್ಷ ರೈತರು ಈಗಾಗಲೇ ಕೆಎಂಎಸ್ ಖರೀದಿಯಿಂದ ಎಂಎಸ್‌ಪಿಯಡಿ 98,456.80 ಕೋಟಿ ರೂ. ಪಡೆದಿದ್ದಾರೆ ಎಂದಿದೆ.
ಇದನ್ನೂ ಓದಿ: 2020-21ರ ಆರ್ಥಿಕತೆಯ ಮೇಲೆ ಕೊರೊನಾ ಕರಿನೆರಳು: ಜಿಡಿಪಿ ಶೇ 7.7ಕ್ಕೆ ಕುಗ್ಗುವ ಸಾಧ್ಯತೆ
ಒಟ್ಟು 521.48 ಲಕ್ಷ ಟನ್ ಖರೀದಿಯ ಪೈಕಿ ಪಂಜಾಬ್ 202.77 ಲಕ್ಷ ಟನ್ ಕೊಡುಗೆ ನೀಡಿದೆ. ಜನವರಿ 6 ರವರೆಗೆ 23,485.05 ಕೋಟಿ ರೂ. ಮೌಲ್ಯದ 80,26,401 ಹತ್ತಿ ಬೇಲ್ಗಳನ್ನು 15,59,429 ರೈತರಿಂದ ಸಂಗ್ರಹಿಸಲಾಗಿದೆ ಎಂದು ಹೇಳಿದೆ.