ನವದೆಹಲಿ: ಕಳೆದ ಒಂದೂವರೆ ತಿಂಗಳಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈರುಳ್ಳಿ ದಾಸ್ತಾನು ಹಾಗೂ ಬೆಲೆ ಸಂಕಷ್ಟ ನಿವಾರಿಸಲು ಹೊಸ ವರ್ಷದಲ್ಲಿ ಒಂದು ಲಕ್ಷ ಟನ್ ಈರುಳ್ಳಿ ಕಾಪು ಸಂಗ್ರಹಕ್ಕೆ ಕೇಂದ್ರ ಮುಂದಾಗಿದೆ. ಪ್ರಸಕ್ತ ವರ್ಷ 56,000 ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ (ಕಾಪು ಸಂಗ್ರಹ) ಇರಿಸಿಕೊಂಡಿತ್ತು. ಇದು ಸಂಕಷ್ಟದಲ್ಲಿ ಸಾಕಾಗಲಿಲ್ಲ.
ಇದರಿಂದಾಗಿ ಈರುಳ್ಳಿ ದರ ₹ 150 ಮೇಲೆ ಹೋಗಿ ಗ್ರಾಹಕರು ತೊಂದರೆ ಅನುಭವಿಸುವಂತಾಗಿತ್ತು. ಮುಂದಿನ ವರ್ಷ ಈರುಳ್ಳಿಯ ಕಾಪು ಸಂಗ್ರಹ ಸಾಮರ್ಥ್ಯವನ್ನು 1 ಲಕ್ಷ ಟನ್ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟದ ಸಮಿತಿ ತೀರ್ಮಾನಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳಿಂದ ಈರುಳ್ಳಿ ಧಾರಣೆ ಏರಿಕೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಫಲ ನೀಡಲಿಲ್ಲ. ಸಾಗರೋತ್ತರ ಮಾರುಕಟ್ಟೆಗಳಿಂದ ಈರುಳ್ಳಿ ತರಿಸಿಕೊಂಡು ಬೆಲೆ ನಿಯಂತ್ರಿಕ್ಕೆ ಮುಂದಾಯಿತು.
ಪ್ರಸಕ್ತ ವರ್ಷದ ಖಾರಿಫ್ ಮತ್ತು ಬೇಸಿಗೆ ವೇಳೆಯಲ್ಲಿ ಈರುಳ್ಳಿ ಬೆಲೆ ಶೇ 26ರಷ್ಟು ಇಳಿಕೆಯಾಗಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಇಳುವರಿಯು ಸಕಾಲದಲ್ಲಿ ಬರದ ಕಾರಣ ಬೆಲೆ ಏರಿಕೆಯಾಗಿತ್ತು.