ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಅಕ್ಷಯ ತೃತೀಯ ಹಬ್ಬದ ನಡುವೆಯೂ ಚಿನ್ನ ಖರೀದಿ ಪ್ರಮಾಣದಲ್ಲಿ ಕುಸಿತವಾಗಿದೆ.
ಅಕ್ಷಯ ತೃತೀಯ ಹಬ್ಬ ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭಾಂಶದ ಸುಗ್ಗಿಯ ಕಾಲ. ಈ ವೇಳೆ ಸಾಕಷ್ಟು ರಿಯಾಯಿತಿ ಕೊಡುಗೆ, ಉಡುಗೊರೆ ಘೋಷಿಸಿ ಆಭರಣ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಾರೆ. ಮಾರಾಟದ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದ ಚಿನ್ನದ ವ್ಯಾಪಾರಿಗಳಿಗೆ ವರುಣನ ಅವಕೃಪೆ ತೋರಿದ್ದಾನೆ.
ಕಳೆದೆರಡು ದಿನಗಳಿಂದ ಚಿನ್ನಾಭರಣ ಖರೀದಿಯಲ್ಲಿ ಉತ್ಸಾಹ ಕಂಡುಬರಲಿದೆ ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದರು. ಆದರೆ, ಸಂಜೆ ಸುರಿದ ಭಾರಿ ಮಳೆಗೆ ಶೇ 30ರಷ್ಟು ಚಿನ್ನ ಖರೀದಿ ಪ್ರಮಾಣ ಇಳಿಕೆಯಾಗಿದೆ. ಸಂಜೆ ಮೇಲೆ ಸುರಿದ ಗಾಳಿ ಸಹಿತ ಮಳೆಯಿಂದ ಚಿನ್ನ ಕೊಳ್ಳಲು ಗ್ರಾಹಕರು ಮಳಿಗೆಗಳತ್ತ ಮುಖ ಮಾಡಿಲ್ಲ. ಅಕ್ಷಯ ತೃತೀಯ ಹಬ್ಬದ ವಾಡಿಕೆಯಂತೆ ಚಿನ್ನ ಖರೀದಿಸಿದರೆ ಚಿನ್ನ ಅಕ್ಷಯ ವಾಗುತ್ತದೆ ಎಂದು ನಂಬಿಕೆಯಿದ್ದು, ಗಾಳಿ ಸಹಿತ ಸುರಿದ ಮಳೆಗೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಸಾಯಿ ಜ್ಯುವೆಲರಿ ಪ್ಯಾಲೇಸ್ನ ಸೆಂತಿಲ್, ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಚಿನ್ನದ ಖರೀದಿ ವ್ಯಾಪಕವಾಗಿ ಕಂಡುಬರುತ್ತದೆ. ಈ ವರ್ಷದಲ್ಲಿ ಮೊದಲ ಹಂತದ ಪ್ರಥಮ ದಿನದ ಸಂಜೆ ವೇಳೆ ಖರೀದಿಯ ಪ್ರಮಾಣ ಗಣನೀಯವಾಗಿ ಇಳಿಕೆ ಆಯಿತು.
ಅಕ್ಷಯ ತೃತೀಯ ಹಾಗೂ ಚುನಾವಣೆಯ ತತ್ಪರಿಣಾಮ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಚಿನ್ನ ಖರೀದಿಯಲ್ಲಿ ಶೇ 30ರಷ್ಟು ಇಳಿಕೆ ಕಂಡಿದೆ. ಅಕ್ಷಯ ತೃತೀಯಂತಹ ಹಬ್ಬದ ಅವಧಿಯಲ್ಲೂ ಹಳದಿ ಲೋಹ ಖರೀದಿ ಕುಸಿದಿರುವುದು ಸಹಜವಾಗಿ ಚಿನ್ನಾಭರಣ ಉದ್ಯಮದಲ್ಲಿ ಸ್ವಲ್ಪ ಮಟ್ಟಿನ ಆತಂಕವಿದೆ ಎಂದು ಹೇಳಿದ್ದಾರೆ.