ಮುಂಬೈ: ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಹೂಡಿಕೆಯ ಹೆಚ್ಚಳ ಹಾಗೂ ದೇಶಿ ಮಾರುಕಟ್ಟೆಯಲ್ಲಿನ ಬೇಡಿಕೆಯ ಪ್ರಭಾವದಿಂದ ಬಂಗಾರದ ಬೆಲೆಯಲ್ಲಿ ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ದರದಲ್ಲಿ ₹ 550 ಏರಿಕೆಯಾಗಿ ₹ 38,470ಯಲ್ಲಿ ವಹಿವಾಟು ನಡೆಸುತ್ತಿದೆ. ಈ ಮೂಲಕ ಚಿನ್ನದ ದರ ಪ್ರಥಮ ಬಾರಿಗೆ 38 ಸಾವಿರ ರೂ. ಗಡಿ ದಾಟಿದೆ. ಬಂಗಾರದ ನಡೆಯನ್ನು ಅನುಸರಿಸಿದ ಬೆಳ್ಳಿ ಕೂಡ ಪ್ರತಿ ಕೆ.ಜಿ. ಮೇಲೆ ₹ 630 ಜಿಗಿತ ಕಂಡು ₹ 44,300ಯಲ್ಲಿ ಮಾರಾಟ ಆಗುತ್ತಿದೆ.
ಕಳೆದ ಎರಡು ದಿನಗಳಲ್ಲಿನ ವಾಣಿಜ್ಯ ಸಮರವು ಡಾಲರ್, ಯೆನ್ ಮತ್ತು ಚಿನ್ನದ ಸುರಕ್ಷಿತ ಧಾಮ ಎಂಬ ಬೇಡಿಕೆಗೆ ಪೂರಕವಾಗಿದೆ. ಅಮೆರಿಕದ ಟ್ರೆಸರರಿ 30 ವರ್ಷಗಳ ಬಾಂಡ್ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕಳೆದ ಐದು ವರ್ಷದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಥಮ ಬಾರಿಗೆ ಪ್ರತಿ ಔನ್ಸ್ ಚಿನ್ನವು 1,500 ಡಾಲರ್ಗೆ ಮಾರಾಟವಾಗಿದೆ.
ಯುಎಸ್- ಚೀನಾ ನಡುವಿನ ವ್ಯಾಪಾರ ಯುದ್ಧದ ಪರಿಣಾಮ ಚೀನಾದ ಸರಕುಗಳ ಮೇಲೆ ಅಮೆರಿಕದ ಸುಂಕ ದರ ಏರಿಕೆ, ಡಾಲರ್ ವಿರುದ್ಧ ಚೀನಾದ ಯುವಾನ್ ಅಪಮೌಲ್ಯೀಕರಣದ ಪ್ರತೀಕಾರದ ಕ್ರಮ, ಮಾರುಕಟ್ಟೆಯ ಅನಿಶ್ಚಿತತೆಯಿಂದ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ. ಇವು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.