ನವದೆಹಲಿ:ಆಭರಣ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲ. ಅಕ್ಷಯ ತೃತೀಯ ಆರಂಭಕ್ಕೂ ಮುನ್ನವೇ ಚಿನ್ನದ ದರದಲ್ಲಿ ಸತತ ನಾಲ್ಕು ದಿನವೂ ಕುಸಿತ ದಾಖಲಿಸಿದೆ.
ಅಂತಾರಾಷ್ಟ್ರೀಯ ಮತ್ತು ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯು ನಿಧಾನಗತಿಯಲ್ಲಿರುವುದು ಚಿನ್ನದ ದರ ಇಳಿಕೆಗೆ ಮತ್ತೊಂದು ಕಾರಣವಾಗಿದೆ. ಮಂದಗತಿಯ ಆರ್ಥಿಕತೆಯಿಂದ ಅಮೆರಿಕದ ಫೆಡರಲ್ ರಿಸರ್ವ್ ತನ್ನ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ಧರಿಸಿದ್ದು, ಸ್ವರ್ಣ ಲೋಹದ ಮೇಲೆ ಪ್ರಭಾವ ಬೀರಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹ 150 ಇಳಿಕೆ ಕಂಡು ₹ 32,470 ಮಟ್ಟದಲ್ಲಿ ವ್ಯವಹಾರ ನಡೆಸುತ್ತಿದೆ. ಪ್ರತಿ ಕೆ.ಜಿ. ಬೆಳ್ಳಿಯು ಈ ಹಿಂದಿನ ಮಟ್ಟ ₹ 32,700 ರಲ್ಲಿ ನಿರತವಾಗಿದೆ. ಅಮೆರಿಕದ ಫೆಡರಲ್ ನಿರ್ಧಾರ ಹಾಗೂ ಜಾಗತಿಕ ಮಟ್ಟದಲ್ಲಿನ ದುರ್ಬಲ ಪ್ರವೃತ್ತಿ ಕಂಡುಬಂದಿದ್ದು, ಸ್ಥಳೀಯ ಆಭರಣದಾರರಿಂದ ಬೇಡಿಕೆ ಹೆಚ್ಚಿದೆ ಎಂದು ಆಲ್ ಇಂಡಿಯಾ ಸರಫ ಅಸೋಸಿಯೆಷನ್ ತಿಳಿಸಿದೆ.
ಕಳೆದ ಮೂರು ವಹಿವಾಟು ದಿನಗಳಲ್ಲಿ ಚಿನ್ನದ ದರದಲ್ಲಿ ₹ 380 ಇಳಿಕೆಯಾಗಿದ್ದು, ನಾಲ್ಕನೇ ದಿನದಂದು ₹150 ಕುಸಿದಿದೆ. ಶುಕ್ರವಾರದ ಚಿನಿವಾರ ಪೇಟೆಯಲ್ಲಿ 99.9 ಹಾಗೂ 99.5 ಪ್ರತಿಶತ ಶುದ್ಧ ಚಿನ್ನವು ಪ್ರತಿ 10 ಗ್ರಾಂ.ನಲ್ಲಿ ₹ 150 ದರ ಕುಸಿದಿದ್ದು, ಕ್ರಮವಾಗಿ ₹ 32,470 ಮತ್ತು ₹ 32,300 ವಹಿವಾಟು ನಡೆಯುತ್ತಿದೆ.