ಲಾಸ್ ಏಂಜಲೀಸ್:ಒಂದೇ ಒಂದು ಕಾರ್ಯಕ್ರಮದಿಂದ ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲನ್ ಮಸ್ಕ್ ಆಸ್ತಿಮೌಲ್ಯ 770 ಮಿಲಿಯನ್ ಡಾಲರ್ ಅರ್ಥಾತ್ 77 ಕೋಟಿ ರೂ. ಕುಸಿತ ಕಂಡಿದೆ. ಮಸ್ಕ್ ಆಸ್ತಿಮೌಲ್ಯ ಏರುಪೇರಾಗಲು ಕಾರಣವೇನು ಅನ್ನೋದನ್ನ ನೋಡೋದಾದರೆ,
ಟೆಸ್ಲಾ ಸಂಸ್ಥೆ ತನ್ನ ಸೈಬರ್ಟ್ರಕ್ ಅನಾವರಣವನ್ನು ದಿನದ ಹಿಂದೆ ಲಾಸ್ ಏಂಜಲೀಸ್ನಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮ ಹಾಗೂ ಟ್ರಕ್ ಬಗ್ಗೆ ವಿಶ್ವಾದ್ಯಂತ ಭಾರಿ ಕುತೂಹಲವಿತ್ತು. ಟೆಸ್ಲಾ ಸಹ ನಂಬಿಕೆ ಉಳಿಸುಕೊಳ್ಳುವ ನಿಟ್ಟಿನಲ್ಲೇ ಸಾಗಿತ್ತು. ಆದರೆ, ಸಾರ್ವಜನಿಕವಾಗಿ ಸಂಸ್ಥೆ ನಡೆಸಿದ ಪರೀಕ್ಷೆ ಮಸ್ಕ್ ಆಸ್ತಿಮೌಲ್ಯಕ್ಕೆ ದೊಡ್ಡ ಪೆಟ್ಟು ನೀಡಿದೆ.
ಸೈಬರ್ಟ್ರಕ್ ಬಲಿಷ್ಠತೆಯನ್ನು ಸಾಬೀತುಪಡಿಸಲು ಸಂಸ್ಥೆ ಮುಂದಾಗಿತ್ತು. ಬಾಸ್ಕೆಟ್ಬಾಲ್ ಮಾದರಿಯ ಲೋಹದ ಚೆಂಡನ್ನು ಟೆಸ್ಲಾ ಸಂಸ್ಥೆಯ ಪ್ರಮುಖ ವಿನ್ಯಾಸಗಾರ ಫ್ರಾಂಜ್ ವನ್ ಹೊಲ್ಜ್ಹ್ಯುಸೆನ್ ಸೈಬರ್ಟ್ರಕ್ ಕಿಟಕಿ ಗ್ಲಾಸಿಗೆ ಹೊಡೆದಿದ್ದಾರೆ. ಅಚ್ಚರಿ ಎನ್ನುವಂತೆ ಕಿಟಕಿ ಗ್ಲಾಸ್ ಮುರಿಯಲ್ಪಟ್ಟಿದೆ. ಇನ್ನೊಂದು ಕಿಟಕಿ ಗ್ಲಾಸ್ ಒಡೆದಾಗಲೂ ಅದೇ ಫಲಿತಾಂಶ ಕಂಡುಬಂದಿದೆ. ಅಸಲಿಗೆ ಇದು ಮುರಿಯಲು ಅಸಾಧ್ಯವಾದ(ಅನ್ಬ್ರೇಕೆಬಲ್) ಗ್ಲಾಸ್ ಎಂದು ಕಂಪನಿ ಹೇಳಿಕೊಂಡಿತ್ತು.
ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲನ್ ಮಸ್ಕ್ ಸಮ್ಮುಖದಲ್ಲಿ ನಡೆದ ಈ ಪರೀಕ್ಷಾರ್ಥ ಪ್ರಯೋಗ ಮಸ್ಕ್ ಮಾತ್ರವಲ್ಲದೇ ಸಂಸ್ಥೆಗೆ ಭಾರಿ ಮುಖಭಂಗವನ್ನುಂಟು ಮಾಡಿತ್ತು. ಕಿಟಕಿ ಗ್ಲಾಸ್ ಪುಡಿಯಾದ ಬಳಿಕ ಪ್ರತಿಕ್ರಿಯಿಸಿರುವ ಎಲನ್ ಮಸ್ಕ್, ಇದಕ್ಕೂ ಮೊದಲು ಹಲವು ಬಾರಿ ವಿವಿಧ ವಸ್ತುಗಳಿಂದ ಪರೀಕ್ಷೆ ನಡೆಸಿದ್ದೆವು. ಆದರೆ ಕಿಟಕಿ ಗ್ಲಾಸು ಏನೂ ಆಗರಲಿಲ್ಲ. ಆದರೆ ಅನಾವರಣದ ಸಂದರ್ಭದಲ್ಲಿ ಏನಾಯಿತು ಎನ್ನುವುದು ತಿಳಿಯುತ್ತಿಲ್ಲ. ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ ಎಂದಿದ್ದಾರೆ.
ಪರೀಕ್ಷಾರ್ಥ ಪ್ರಯೋಗದ ಬಳಿಕ ಸೈಬರ್ಟ್ರಕ್ನೊಂದಿಗೆ ಮಸ್ಕ್
ಈ ಕಾರ್ಯಕ್ರಮದ ಬಳಿಕ ಎಲನ್ ಮಸ್ಕ್ ಷೇರಿನಲ್ಲಿ ಭಾರಿ ಕುಸಿತ ಕಂಡಿದೆ. ಶೇ.6ರಷ್ಟು ಇಳಿಕೆಯಾಗುವ ಮೂಲಕ 770 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ.