ನವದೆಹಲಿ :2020ರ ಅಕ್ಟೋಬರ್‌ನಲ್ಲಿ 1 ಬಿಟ್ ಕಾಯಿನ್ ಬೆಲೆ 13 ಸಾವಿರ ಡಾಲರ್ ಇತ್ತು. 2021ರ ಅಕ್ಟೋಬರ್ ವೇಳೆಗೆ 1 ಬಿಟ್ ಕಾಯಿನ್ ಬೆಲೆ 67 ಸಾವಿರ ಡಾಲರ್‌ಗೆ ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ಬಿಟ್ ಕಾಯಿನ್ ಮೌಲ್ಯ ಒಂದಲ್ಲ, ಎರಡಲ್ಲ ಬರೋಬ್ಬರಿ 5 ಪಟ್ಟು ಹೆಚ್ಚಳಗೊಂಡಿದೆ.
ಅತಿ ಕಡಿಮೆ ಸಮಯದಲ್ಲಿ ಇಷ್ಟೊಂದು ಬೆಳವಣಿಗೆಯನ್ನು ನೋಡಿದರೆ ಬಿಟ್ ಕಾಯಿನ್ ಅತ್ಯುತ್ತಮ ಹೂಡಿಕೆ ಸಾಧನವಾಗಿದೆ. ನೀವು ಬಿಟ್‌ಕಾಯಿನ್ ನಂಬಿದರೆ, ಸುಲಭವಾಗಿ, ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದು ಎಂದು ಅನಿಸಬಹುದು. ಹಾಗಾದರೆ, ಇದೆಲ್ಲಾ ನಿಜವೇ? 'ಕ್ರಿಪ್ಟೋಕರೆನ್ಸಿ' ಎಷ್ಟು ಸುರಕ್ಷಿತವಾಗಿದೆ? ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ತಜ್ಞರು ಒಂದಷ್ಟು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ಊಹಾತ್ಮಕ ಕರೆನ್ಸಿಯ ಮೌಲ್ಯವು ಏರುತ್ತಿದೆ. ಆದರೆ, ತೀವ್ರ ಏರಿಳಿತಗಳನ್ನೂ ಎದುರಿಸುತ್ತಿದೆ. ಹೀಗಾಗಿ, ಹೂಡಿಕೆದಾರರು ಈ ನಿಟ್ಟಿನಲ್ಲಿ ಜಾಗರೂಕರಾಗಿರಬೇಕು ಎಂದು ಕ್ರಿಪ್ಟೋಕರೆನ್ಸಿ ಸೇವಾ ಪೂರೈಕೆದಾರರಾದ ವಜಿರ್‌ಎಕ್ಸ್‌ನ ಸಂಸ್ಥಾಪಕ ನಿಶ್ಚಲ್ ಶೆಟ್ಟಿ ಸಲಹೆ ನೀಡಿದ್ದಾರೆ. ಇವುಗಳನ್ನು ಅಲ್ಪಾವಧಿಯಲ್ಲಿ ಹೆಚ್ಚು ಲಾಭ ನೀಡುವ ಯೋಜನೆ ಎಂದು ಇದನ್ನು ಪರಿಗಣಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ವರ್ಷದಲ್ಲಿ ಬಿಟ್‌ಕಾಯಿನ್ ಅನುಭವಿಸಿದ ಏರಿಳಿತಗಳ ವಿವರಗಳು ಇಲ್ಲಿವೆ.
ಇದೇ ವರ್ಷದ ಏಪ್ರಿಲ್‌ನಲ್ಲಿ ಸುಮಾರು 63,000 ಡಾಲರ್ ಇದ್ದ ಬಿಟ್‌ಕಾಯಿನ್ ಮೌಲ್ಯವು ಜುಲೈ ವೇಳೆಗೆ 30,000ಕ್ಕಿಂತ ಕಡಿಮೆ ಡಾಲರ್‌ಗೆ ಇಳಿದಿತ್ತು. ಆದರೆ, ಈ ತಿಂಗಳ ಆರಂಭದಲ್ಲಿ 43,700 ಡಾಲರ್‌ಗೆ ಹಾಗೂ ಮಂಗಳವಾರದ ವೇಳೆಗೆ 63,000 ಡಾಲರ್‌ಗೆ ತಲುಪಿ ದಾಖಲೆ ಬರೆದಿದೆ.
'ಬಿಟ್' ಮಾಯೆ
ಬಿಟ್‌ಕಾಯಿನ್ ಮೌಲ್ಯವು ಗಣನೀಯವಾಗಿ ಗಗನಕ್ಕೇರಲು ಹಲವು ಕಾರಣಗಳಿವೆ. ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಸೇರಿ ಕೆಲವು ಸೆಲೆಬ್ರಿಟಿಗಳು ಕ್ರಿಪ್ಟೋಕರೆನ್ಸಿಗೆ ಬೆಂಬಲವಾಗಿ ನಿಂತಿದ್ದಾರೆ. ವಿಶೇಷವಾಗಿ ಮಸ್ಕ್ ತನ್ನ ಕಾರು ಖರೀದಿ ಪಾವತಿಗಳಿಗೆ ಕ್ರಿಪ್ಟೋಕರೆನ್ಸಿಯನ್ನು ಸ್ವೀಕರಿಸುವುದಾಗಿ ಘೋಷಿಸಿದ್ದಾರೆ.
ಅಕ್ಟೋಬರ್ 19ರಂದು ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಾಯಿಸಲಾದ ಕ್ರಿಪ್ಟೋಕರೆನ್ಸಿ 'ಬಿಟ್‌ಕಾಯಿನ್ ಸ್ಟ್ರಾಟಜಿ ಇಟಿಎಫ್' (ಬಿಟೋ) 900 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ವಹಿವಾಟು ನಡೆಸಿದೆ. ಇದು 'ಬ್ಲ್ಯಾಕ್‌ರಾಕ್ ಕಾರ್ಬನ್ ಫಂಡ್' ನಂತರ ಮೊದಲ ದಿನದ ಎರಡನೇ ಅತಿ ಹೆಚ್ಚು ವಹಿವಾಟು ಆಗಿದೆ.
ಬಿಟ್‌ಕಾಯಿನ್ ಮತ್ತು ಆಲ್ಟ್‌ಕಾಯಿನ್ ಬೆಲೆಗಳಲ್ಲಿನ ಏರಿಕೆಯು ಪ್ರಪಂಚದಾದ್ಯಂತದ ಫ್ಯೂಚರ್ಸ್ ಮಾರುಕಟ್ಟೆಗಳಲ್ಲಿ ಊಹಾತ್ಮಕ ಕರೆನ್ಸಿಗಳ ಮೇಲಿನ ವ್ಯಾಪಾರದ ಬೆಳವಣಿಗೆಗೆ ಸಂಬಂಧಿಸಿದೆ ಎಂದು ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ವಾಜಿರ್‌ಎಕ್ಸ್‌ನ ಸಂಸ್ಥಾಪಕ ನಿಶ್ಚಲ್ ಶೆಟ್ಟಿ ಹೇಳಿದ್ದಾರೆ.
ಹೂಡಿಕೆದಾರರು ಕ್ರಿಪ್ಟೋಕರೆನ್ಸಿಯಲ್ಲಿ ಆಸಕ್ತಿ ಹೊಂದಿದ್ದಾರೆಂದು ಇತ್ತೀಚಿನ ಅಂಕಿ-ಅಂಶಗಳು ತೋರಿಸುತ್ತವೆ. ಒಟ್ಟಾರೆಯಾಗಿ, ಇದು ಬಿಟ್‌ಕಾಯಿನ್‌ನ ಭವಿಷ್ಯಕ್ಕಾಗಿ ಉತ್ತಮ ಸಂಕೇತವಾಗಿದೆ. ಇದು ಹೊಸ ಹೂಡಿಕೆದಾರರನ್ನು ಈ ವ್ಯಾಪಾರದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ ಎಂದಿದ್ದಾರೆ.
ಮತ್ತೊಂದೆಡೆ, ಬಿಟ್‌ಕಾಯಿನ್ ಮಾರುಕಟ್ಟೆಯ ಬಗ್ಗೆ ಜಾಗರೂಕರಾಗಿರಿ ಎಂದು ನಿಶ್ಚಲ್ ಶೆಟ್ಟಿ ಭಾರತೀಯ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಾರುಕಟ್ಟೆ ಆಕ್ರಮಣಕಾರಿಯಾಗಿದ್ದರೂ ದುರಾಸೆಗೆ ಒಳಗಾಗದಿರುವುದು ಮುಖ್ಯ. ಯಾವುದೇ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವ ಮೊದಲು ನಿಮ್ಮದೇ ಆದ ಸಂಶೋಧನೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.