ಮುಂಬೈ:ದೇಶೀಯ ಕಂಪನಿಗಳಿಗೆ ಎಲ್ಲ ಸೆಸ್ ಮತ್ತು ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಂತೆ ಕೇಂದ್ರವು ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 25.17ಕ್ಕೆ ಇಳಿಸಿದ ನಂತರ ಭಾರತಕ್ಕೆ ದೀಪಾವಳಿ ಹಬ್ಬ ಮುಂಚಿತವಾಗಿಯೇ ಬಂದಂತಾಗಿದೆ.
ಏಪ್ರಿಲ್ 1 ರಿಂದ ಪ್ರಾರಂಭವಾಗುವ ಪ್ರಸಕ್ತ ಹಣಕಾಸು ವರ್ಷದಿಂದ ಹೊಸ ತೆರಿಗೆ ದರ ಅನ್ವಯವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಿಂದ ವಾರ್ಷಿಕವಾಗಿ 1.45 ಲಕ್ಷ ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
ಈ ಕ್ರಮವು ಭಾರತದ ತೆರಿಗೆ ದರವನ್ನು ಏಷ್ಯಾದ ಇತರ ರಾಷ್ಟ್ರಗಳಿಗೆ ಸಮನಾಗಿರುತ್ತದೆ. ಅಲ್ಲದೇ ಅಮೆರಿಕ - ಚೀನಾ ವ್ಯಾಪಾರ ಯುದ್ಧದಿಂದ ಪೂರೈಕೆಗಿರುವ ಅಡೆತಡೆಗಳನ್ನು ನಿವಾರಿಸಲು ಕಂಪನಿಗಳು ಪರ್ಯಾಯ ಸ್ಥಳವನ್ನ ಹುಡುಕುತ್ತಿರುವುದರಿಂದ ಹೂಡಿಕೆಗಳನ್ನ ಆಕರ್ಷಿಸುವ ಪ್ರಯತ್ನಗಳನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸರ್ಕಾರದ ಪ್ರಕಟಣೆಯನ್ನು ಸ್ವಾಗತಿಸಿದ್ದು, ಇದನ್ನು 'ದಿಟ್ಟ ನಡೆ' ಎಂದು ಕರೆದಿದ್ದಾರೆ. ದೇಶೀಯ ಹೂಡಿಕೆದಾರರ ಸಂಪತ್ತು 2.11 ಲಕ್ಷ ಕೋಟಿ ರೂಪಾಯಿ ತಲುಪಿದೆ ಎಂದಿದ್ದಾರೆ.
ಇನ್ನು ಹಣಕಾಸು ಸಚಿವರ ನಿರ್ಧಾರದಿಂದ ಷೇರು ಪೇಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಬಿಎಸ್ಇ ಸೆನ್ಸೆಕ್ಸ್ ಸೆನ್ಸೆಕ್ಸ್ 1837.52 ಅಂಕಗಳ ಏರಿಕೆ ಕಂಡಿದ್ದು, 37,913.34 ಅಂಕಕ್ಕೆ ತಲುಪಿದೆ. ನಿಫ್ಟಿ ಕೂಡ 500 ಅಂಕಗಳ ಹೆಚ್ಚಳ ದಾಖಲಿಸಿತ್ತು.