ಬೆಂಗಳೂರು/ ನವದೆಹಲಿ:ದಿನದ ಹಿಂದೆಯಷ್ಟೇ ಗದಗ, ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಲ್ಗೆ 2,000 ದಿಂದ 3,000 ರೂ.ಗೆ ಖರೀದಿಯಾಗುತ್ತಿದ್ದ ಈರುಳ್ಳಿ ಬೆಲೆ ಏಕಾಏಕಿ 100- 500 ರೂ.ಗೆ ಇಳಿದಿದೆ. ಇನ್ನೊಂದೆಡೆ ದೇಶದ ಪ್ರಮುಖ ಮಂಡಿಗಳಲ್ಲಿ ಕೆ.ಜಿ ಈರುಳ್ಳಿ ಸಹ ₹ 100 ದರದಲ್ಲಿ ಮಾರಾಟ ಆಗುತ್ತಿದೆ. ಬೆಳೆ ಬೆಳೆದ ರೈತನಿಗೆ ಲಾಭ ಸಿಗದೆ ಪರದಾಡುವಂತಾಗಿದ್ದು, ದಿಢೀರನೇ ಬೆಲೆ ಕುಸಿತದಿಂದ ಕುಪಿತರಾದ ರೈತರು, ದಲ್ಲಾಳಿಗಳು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೈತರು ಬೆಲೆ ಇಳಿಕೆಯಿಂದ ಹೈರಾಣಾಗುತ್ತಿದ್ದರೇ ಚಿಲ್ಲರೆ ಮಾರಾಟದಲ್ಲಿನ ದರ ಏರಿಕೆಯಿಂದ ಗ್ರಾಹಕರು ಪರದಾಡುವಂತಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ, ಚೆನ್ನೈ, ಭುವನೇಶ್ವರ ಸೇರಿದಂತೆ ಇತರೆ ಪ್ರಮುಖ ನಗರಗಳ ಮಾರುಕಟ್ಟೆಗಳಲ್ಲಿ ಕೆ.ಜಿ. ಈರುಳ್ಳಿ ₹ 100 ಆಸುಪಾಸಿನಲ್ಲಿ ಮಾರಾಟ ಆಗುತ್ತಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಅಕ್ಟೋಬರ್ 1ರಂದು ಕೆ.ಜಿ. ಈರುಳ್ಳಿ ದರ 55 ರೂ.ಯಲ್ಲಿ ಇತ್ತು. ಕಳೆದ ಒಂದು ವಾರದಲ್ಲಿ 45 ಪ್ರತಿಶತದಷ್ಟು ಏರಿಕೆಯಾಗಿದೆ. ಪೂರೈಕೆಯ ಹೆಚ್ಚಳ ಮತ್ತು ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು ಬೆಲೆ ತಗ್ಗಿಸುವಲ್ಲಿ ವಿಫಲವಾಗಿದವೆ. ಕೆ.ಜಿ. ಈರುಳ್ಳಿ 80 ರೂ.ಗೆ ತಲುಪಿದೆ. ಆದರೆ, ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 90-100 ರೂ. ಖರೀದಿ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಯಥೇಚ್ಛವಾಗಿ ಬೆಳೆಯಲಾಗುವ ಈರುಳ್ಳಿ, ಇತ್ತೀಚೆಗೆ ಈ ರಾಜ್ಯಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ, ದೇಶದ ನಾನಾ ಮಂಡಿಗಳಿಗೆ ಸಮರ್ಪಕವಾಗಿ ಈರುಳ್ಳಿ ಸರಬರಾಜು ಆಗುತ್ತಿಲ್ಲ. ಕಳೆದ ಒಂದು ತಿಂಗಳಿಂದ ಈರುಳ್ಳಿ ದರದಲ್ಲಿ ಏರಿಕೆ ಕಂಡುಬರುತ್ತಿದೆ. ಕೇಂದ್ರ ಸರ್ಕಾರ ದಾಸ್ತಾನು ಪ್ರಮಾಣ ನಿಗದಿ ಮಾಡಿ ರಫ್ತು ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದೆ. ಆದರೂ ದರದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.
ಇನ್ನೊಂದಡೆ ಕರ್ನಾಟಕದಲ್ಲಿ ಈರುಳ್ಳಿ ಬೆಳೆಯುವ ಧಾರವಾಡ, ಗದಗ, ಬಳ್ಳಾರಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ದಿಢೀರನೇ ದರ ಕುಸಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಹಾಗೂ ರೈತಪರ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಈರುಳ್ಳಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಕೇಂದ್ರದ ಕೆಲಸ. ಆದ್ರೆ, ಈರುಳ್ಳಿ ಬೆಳೆ ರಫ್ತು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.