ನವದೆಹಲಿ: ರಿಲಾಯನ್ಸ್ ಜಿಯೋ-ಫೇಸ್ಬುಕ್ ಒಡಂಬಡಿಕೆಯ 43,574 ಕೋಟಿ ರೂ. ಮಹತ್ವಾಕಾಂಕ್ಷಿಯ ವಾಟ್ಸ್ಆ್ಯಪ್ ಆಧಾರಿತ ಜಿಯೋಮಾರ್ಟ್ ವಹಿವಾಟು ಪ್ರಾಯೋಗಿಕವಾಗಿ ಆರಂಭವಾಗಿದೆ.
ರಿಲಾಯನ್ಸ್ ಇಂಡಸ್ಟ್ರೀಸ್ನ ಜಿಯೋ ಲಿಮಿಟೆಡ್ನಲ್ಲಿ ಫೇಸ್ಬುಕ್ 43,574 ಕೋಟಿ ರೂ. ಹೂಡಿಕೆ ಮಾಡಿತ್ತು. ಫೇಸ್ಬುಕ್ ಒಡೆತನದ ವಾಟ್ಸ್ಆ್ಯಪ್ ಅಪ್ಲಿಕೇಷನ್ನಲ್ಲಿ ತನ್ನ ಜಿಯೋಮಾರ್ಟ್ನ ಇ-ಕಾಮರ್ಸ್ ಸಮರ್ಪಕವಾಗಿ ಬಳಸಿಕೊಳ್ಳಲು ಅಮೆರಿಕದ ದೈತ್ಯ ಕಂಪನಿಯೊಂದಿಗೆ ಹೂಡಿಕೆ ಒಪ್ಪಂದವನ್ನು ಮುಖೇಶ್ ಅಂಬಾನಿ ಮಾಡಿಕೊಂಡಿದ್ದರು.
ಕಿರಾಣಿ ಅಂಗಡಿಗಳ ಇ- ಕಾಮರ್ಸ್ಗೆ ವ್ಯಾಪಾರ ಒಕ್ಕೂಟ ಸಾಥ್
ಭಾರತದ ಇ-ಕಾಮರ್ಸ್ ವಿಶಾಲವಾದ ಮಾರುಕಟ್ಟೆಯಾಗಿದ್ದು, ಡಿಜಿಟಲೀಕರಣಕ್ಕೆ ಅನುಕೂಲಕರವಾದ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಸಾಕಷ್ಟು ಸ್ಪರ್ಧಾತ್ಮಕವಾಗಿರುವ ದೇಶಿ ಇ-ಕಾಮರ್ಸ್ ವಲಯ, ರಿಲಾಯನ್ಸ್ ಸೇರಿದಂತೆ ಯಾವುದೇ ಸಂಸ್ಥೆಗಳು ಸ್ಥಳೀಯ ಕಾನೂನು, ನಿಯಮ ಮತ್ತು ನಿಬಂಧನೆಗಳ ಅನುಸರಣೆ ಮೂಲಕ ಮಾರುಕಟ್ಟೆ ಪ್ರವೇಶಿಸಬಹುದಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಹೇಳಿದೆ.
ಸ್ಥಳೀಯ ಕಿರಾಣಿ ಮಳಿಗೆಗಳ ಆಧುನೀಕರಣಕ್ಕೆ ನೆರವಾಗುವ ಭಾರತೀಯ ಇ-ಕಾಮರ್ಸ್ ಕಂಪನಿಗಳ ಹಾಗೂ ನಿಯಮ ಮತ್ತು ನಿಬಂಧನೆಗಳನ್ನು ಸಿಎಐಟಿ ಬೆಂಬಲಿಸಲಿದೆ. ದೇಶದ 7 ಕೋಟಿ ವ್ಯಾಪಾರಿಗಳನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಒಕ್ಕೂಟಕ್ಕೆ, ಫೇಸ್ಬುಕ್-ರಿಲಾಯನ್ಸ್ ಒಪ್ಪಂದ ಕುರಿತ ತನ್ನ ನಿಲುವಿನ ಬಗ್ಗೆ ಪಿಟಿಐ ಕಳುಹಿಸಿರುವ ಪ್ರಶ್ನೆಗಳಿಗೆ ಇ-ಮೇಲ್ ಮೂಲಕ ಪ್ರತಿಕ್ರಿಯೆ ನೀಡಿದೆ. 'ಇಲ್ಲಿನ ಮಾನದಂಡಗಳನ್ನು ಅನುಸರಿಸುವ ಯಾವುದೇ ಅಸ್ತಿತ್ವಕ್ಕೆ ಸಾಕಷ್ಟು ಅವಕಾಶಗಳಿವೆ' ಎಂದು ಹೇಳಿದೆ.
ಈ ಹಿಂದೆ ಅಮೆಜಾನ್ ನಂತಹ ವಿದೇಶಿ ಇ-ಕಾಮರ್ಸ್ಗಳನ್ನು ಕಟುವಾಗಿ ವಿರೋಧಿಸಿದ ಸಿಎಐಟಿ, 'ಅಗ್ಗದ ರಿಯಾಯಿತಿಗಳನ್ನು ನೀಡಿ ಸಣ್ಣ ಉದ್ಯಮಗಳನ್ನು ಕೊಲ್ಲುತ್ತಿದೆ' ಎಂದು ಆರೋಪಿಸಿತ್ತು. ಇದು ಎಂದಿಗೂ ಇ-ಕಾಮರ್ಸ್ ವಹಿವಾಟು ವಿರೋಧಿಸಿಲ್ಲ. ಹೆಚ್ಚುವರಿ ವಹಿವಾಟಿಗಾಗಿ ಅದು ಆಯ್ದು ಕೊಳ್ಳುತ್ತಿದ ವ್ಯಾಪಾರ ಧೋರಣೆ ಬಗ್ಗೆ ಕಟುವಾಗಿ ವಿರೋಧ ವ್ಯಕ್ತಪಡಿಸಿತ್ತು ಎಂದು ಸ್ಪಷ್ಟನೆ ನೀಡಿದೆ.
ಜಿಯೋಮಾರ್ಟ್ನ ವಾಟ್ಸ್ಆ್ಯಪ್ ಪ್ರಾಯೋಗಿಕ ವಹಿವಾಟು ಶುರು:
ಈ ಎಲ್ಲ ಬೆಳವಣಿಗೆಗಳ ನಡುವೆ ರಿಲಯನ್ಸ್ ಜಿಯೋಮಾರ್ಟ್ ಈಗಾಗಲೇ ನವಿ ಮುಂಬೈ, ಥಾಣೆ ಮತ್ತು ಕಲ್ಯಾಣ್ಗಳಲ್ಲಿ ಕಿರಾಣಿ ಆರ್ಡರ್ಗಳಿಗೆ ಪ್ರಾಯೋಗಿಕವಾಗಿ ವಾಟ್ಸ್ಆ್ಯಪ್ನಲ್ಲಿ ಗ್ರಾಹಕರೊಂದಿಗೆ ಮಾತುಕತೆ ಆರಂಭಿಸಿದೆ. ಜಿಯೋಮಾರ್ಟ್ ವೆಬ್ ಪುಟದಲ್ಲಿ ಮಳಿಗೆಯ ಆರ್ಡರ್ ಪರಿಶೀಲಿಸುತ್ತಾರೆ. ವಾಟ್ಸ್ಆ್ಯಪ್ನಲ್ಲಿ ರಿಟೇಲ್ ಸ್ಟೋರ್ನೊಂದಿಗೆ ಸಂಪರ್ಕ ಪಡೆದ ನಂತರ ಗ್ರಾಹಕರು ಕಿರಾನಾ ಸ್ಟೋರ್ಗಳಿಂದ ಆರ್ಡರ್ ಎತ್ತಿಕೊಳ್ಳುತ್ತಾರೆ.