ಬೆಂಗಳೂರು:ರಾಜ್ಯಾದ್ಯಂತ ಬಿಸಿಲಿನ ತಾಪಮಾನದ ಜೊತೆಗೆ ಚುನಾವಣೆ ಕಾವು ಏರುತ್ತಿದೆ. ಈ ನಡುವೆ ಮದ್ಯ ಪ್ರಿಯರಿಗೆ ದರ ಏರಿಕೆ ಬಿಸಿಯೂ ಸಹ ಎಪ್ರಿಲ್ ಒಂದರಿಂದ ತಟ್ಟಲಿದೆ.
ಚುನಾವಣೆ, ಬಿಸಿಲ ಝಳದ ಜತೆಗೆ ಬಿಯರ್ ಪ್ರಿಯರಿಗೆ ದರ ಏರಿಕೆ ಬಿಸಿ - ಆಲ್ಕೋಹಾಲ್
ಬಜೆಟ್ನಲ್ಲಿ ಘೋಷಿಸಿದ್ದ ಬೆಲೆ ಏರಿಕೆ ನೂತನ ಆರ್ಥಿಕ ವರ್ಷ ಆರಂಭವಾಗುವ ಎಪ್ರಿಲ್ 1ರಿಂದ ಜಾರಿಗೆ ಬರಲಿದೆ. ಬಾಟಲ್ ಬಿಯರ್ ಬೆಲೆ ಕನಿಷ್ಠ ₹ 15 ರಿಂದ 20ಕ್ಕೆ ಏರಿಕೆ ಆಗುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದರ ಏರಿಕೆಗೆ ಅನ್ವಯವಾಗುವುದಿಲ್ಲ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಡಿಸಿದ್ದ 2019-20ನೇ ಸಾಲಿನ ಬಜೆಟ್ನಲ್ಲಿ ಕಡಿಮೆ ಆಲ್ಕೋಹಾಲ್ ಅಂಶವಿರುವ ಬಿಯರ್ ಸೇರಿದಂತೆ ಎಲ್ಲ ಬಗೆಯ ಮದ್ಯಗಳ ಮೇಲಿನ ಸುಂಕದಲ್ಲಿ ಏರಿಕೆ ಮಾಡಲಾಗುವುದೆಂದು ಪ್ರಕಟಿಸಿದ್ದರು.
ಹೆಚ್ಚುವರಿ ಅಬಕಾರಿ ಸುಂಕ ಪ್ರತಿ ಬಲ್ಕ್ ಲೀ.ಗೆ ₹ 12.50ಯಿಂದ ₹ 25ಗೆ ಹೆಚ್ಚಳವಾಗಲಿದೆ. ಕಡಿಮೆ ಆಲ್ಕೋಹಾಲ್ ಪಾನೀಯ (ಎಲ್‌ಎಬಿ) ಅಬಕಾರಿ ಸುಂಕ ಪ್ರತಿ ಬಲ್ಕ್ ಲೀ.ಗೆ ₹ 5ರಿಂದ ₹ 10ಗೆ ಏರಿಕೆ ಆಗಲಿದೆ. ಹೆಚ್ಚುವರಿ ಅಬಕಾರಿ ಸುಂಕ ಶೇ 122ರಿಂದ ಶೇ 150ಕ್ಕೆ ತಲುಪಲಿದೆ. ಬಾಟಲ್ ಬಿಯರ್ ಜೊತೆಗೆ ಟಿನ್ ಬಿಯರ್, ಡ್ರಾಟ್ ಬಿಯರ್, ಪಿಕ್ಚರ್ ಸೇರಿ ಎಲ್ಲ ವಿಧದ ಬಿಯರ್ ಬೆಲೆಯೂ ಕೂಡ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ.