ನವದೆಹಲಿ: ಬಹುನಿರೀಕ್ಷಿತ ಐಫೋನ್ 12 ಸರಣಿಯು ಅಕ್ಟೋಬರ್ 30ರಿಂದ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಆರಂಭಿಕ ಬೆಲೆಯು 69,900 ರೂ.ಯಿಂದ ಪ್ರಾರಂಭವಾಗಲಿದೆ. ಈ ಸಾಧನಗಳು 64 ಜಿಬಿ, 128 ಜಿಬಿ, ಮತ್ತು 256 ಜಿಬಿ ಮೆಮೊರಿ ಸಾಮರ್ಥ್ಯದ ರೂಪಾಂತರಗಳಲ್ಲಿ ಲಭ್ಯವಿರುತ್ತವೆ. ಐಫೋನ್ 12 ಫೋನ್ 76,900 ರೂ.ಯಿಂದ ಪ್ರಾರಂಭವಾಗಲಿದ್ದು, 12 ಮಿನಿ ಆರಂಭಿಕ ಬೆಲೆ 69,900 ರೂ.ಗೆ ಮಾರಾಟವಾಗಲಿದೆ.
ಮತ್ತೊಂದೆಡೆ ಐಫೋನ್ 12 ಪ್ರೊ 64 ಜಿಬಿ ರೂಪಾಂತರಕ್ಕೆ 1,19,900 ರೂ. ವೆಚ್ಚವಾಗಲಿದ್ದು, 12 ಪ್ರೊ ಮ್ಯಾಕ್ಸ್ ಭಾರತದಲ್ಲಿ 1,29,900 ರೂ. ದರದಿಂದ ಪ್ರಾರಂಭವಾಗುತ್ತದೆ. ಅಕ್ಟೋಬರ್ 30ರಿಂದ ಈ ಎರಡು ಸಾಧನಗಳನ್ನು ಸಹ ಮಾರಾಟ ಮಾಡಲಾಗುತ್ತದೆ.
ಕಂಪನಿಯು ತನ್ನ ಆ್ಯಪಲ್ ಟಿವಿ ಸ್ಟ್ರೀಮಿಂಗ್ ಸೇವೆಗೆ ಒಂದು ವರ್ಷದ ಅವಧಿಯ ಚಂದಾದಾರಿಕೆ ಮತ್ತು ಹೊಸ ಖರೀದಿಗಳೊಂದಿಗೆ ಮೂರು ತಿಂಗಳ ಆ್ಯಪಲ್ ಆರ್ಕೇಡ್ ಸಹ ನೀಡುತ್ತಿದೆ. ಹೆಚ್ಚು ಪರಿಸರ ಸ್ನೇಹಿಯಾಗಿರಲು ಆ್ಯಪಲ್ ಡ್ರೈವ್‌ನ ಭಾಗವಾಗಿ ಸಾಧನಗಳ ಬಾಕ್ಸ್ ಚಾರ್ಜರ್‌ಗಳೊಂದಿಗೆ ನೀಡುವುದಿಲ್ಲ. ಕಂಪನಿಯು ಹೊಸ ಮ್ಯಾಗ್‌ಸೇಫ್ ಪರಿಕರಗಳನ್ನು ಪರಿಚಯಿಸಿದ್ದು, ಇದು ಚಾರ್ಜಿಂಗ್‌ಗಾಗಿ ತನ್ನ ಸ್ವಾಮ್ಯದ ಮ್ಯಾಗ್ನೆಟಿಕ್ ಪಿನ್ ತಂತ್ರಜ್ಞಾನ ಬಳಸುತ್ತದೆ. ನವೆಂಬರ್ 6 ರಿಂದ ಇವುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.