ಸ್ಯಾನ್ ಫ್ರಾನ್ಸಿಸ್ಕೊ(ಅಮೆರಿಕ) :ಜಗತ್ತಿನ ಪ್ರಮುಖ ಮೊಬೈಲ್ ತಯಾರಿಕಾ ಕಂಪನಿಆ್ಯಪಲ್ 2019ರ ಕೊನೆಯ ಮೂರು ತಿಂಗಳುಗಳಲ್ಲಿ ದಾಖಲಿಸಿದ ಫಲಿತಾಂಶವನ್ನು ಪ್ರಕಟಿಸಿದೆ. ಕಂಪನಿಯು ಡಿಜಿಟಲ್ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಂತೆಯೇ ಐಫೋನ್‌ಗಳ ಮಾರಾಟದಲ್ಲಿ ಹಾಗೂ ಲಾಭ ಗಳಿಕೆಯಲ್ಲಿ ದಾಪುಗಾಲಿಟ್ಟಿದೆ.
ಕಳೆದ ತ್ರೈಮಾಸಿಕದಲ್ಲಿ ಆ್ಯಪಲ್ ಕಂಪನಿಯ ನಿವ್ವಳ ಆದಾಯ ಕಂಪನಿಗೆ ಹೊಸ ದಾಖಲೆಯನ್ನು ತಂದು ಕೊಟ್ಟಿದೆ ಎಂದು ಐಫೋನ್ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಲುಕಾ ಮಾಸ್ಟ್ರಿ ಹೇಳಿದ್ದಾರೆ.
ಕುಸಿದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಮತ್ತು ಹೆಚ್ಚುತ್ತಿರುವ ಸ್ಪರ್ಧೆಯ ಮಧ್ಯೆ ಆ್ಯಪಲ್ ತನ್ನ ಆದಾಯದ ಸ್ಥಿತಿಗತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು ಮ್ಯೂಸಿಕ್, ಸ್ಟ್ರೀಮಿಂಗ್ ಟೆಲಿವಿಷನ್ ಮತ್ತು ಇತರ ಡಿಜಿಟಲ್ ವಿಷಯಗಳಂತಹ ಸೇವೆಗಳನ್ನು ನೀಡುವತ್ತ ಗಮನ ಕೇಂದ್ರೀಕರಿಸಿದೆ. ಒಂದು ವರ್ಷದ ಹಿಂದೆ ಸ್ಮಾರ್ಟ್‌ಫೋನ್ ಮಂದಗತಿಯ ಮಾರಾಟದಿಂದ ಕಳವಳ ವ್ಯಕ್ತಪಡಿಸಿದ ಆ್ಯಪಲ್ ಕಂಪನಿಯು, ಇದೀಗ ಗಮನಾರ್ಹ ಬೆಳವಣಿಗೆ ಕಂಡಿದೆ.
ಆ್ಯಪಲ್ ಷೇರುಗಳು ಕಳೆದ ವರ್ಷದಿಂದ ದ್ವಿಗುಣಗೊಂಡಿದ್ದು, ಅದರ ಮೌಲ್ಯ 1.3 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ. ಈ ಮೌಲ್ಯ ಹೆಚ್ಚಲು ಮುಖ್ಯವಾಗಿ ಕಾರಣವಾಗಿದ್ದು ಕಂಪನಿಯ ಸ್ಟ್ರೀಮಿಂಗ್ ಟೆಲಿವಿಷನ್ ಕೊಡುಗೆ, ಡಿಜಿಟಲ್ ಪಾವತಿ ಮತ್ತು ಧರಿಸಬಹುದಾದ ತಂತ್ರಜ್ಞಾನಗಳಾದ ಐ-ಪಾಡ್ಸ್ ಮತ್ತು ನೂತನವಾಗಿ ನವೀಕರಿಸಿದ ಆಪಲ್ ವಾಚ್.