ನವದೆಹಲಿ:ಏಕಬಳಕೆ ಪ್ಲಾಸ್ಟಿಕ್ ನಿರ್ಮೂಲನೆಗೆ ಪ್ರಧಾನಿ ಮೋದಿ ಭಾರತೀಯರಿಗೆ ಕರೆಕೊಟ್ಟಿದ್ದು, ಇದೇ ವಿಚಾರವಾಗಿ ವಿಶ್ವದಲ್ಲೇ ಅಗ್ರ ಮಾರುಕಟ್ಟೆ ಹೊಂದಿರುವ ಅಮೆರಿಕ ಮೂಲದ ಅಮೆಜಾನ್ ಸಂಸ್ಥೆ ತನ್ನ ಬೆಂಬಲ ಸೂಚಿಸಿದೆ.
ಜೂನ್ 2020ರ ವೇಳೆಗೆ ಏಕಬಳಕೆ ಪ್ಲಾಸ್ಟಿಕ್ ಬಳಕೆಯನ್ನು ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ಅಮೆಜಾನ್ ಸಂಸ್ಥೆ ಇಂದು ಅಧಿಕೃತವಾಗಿ ಘೋಷಿಸಿಕೊಂಡಿದೆ.
ಅಮೆಜಾನ್ ತನ್ನ ಪ್ಯಾಕೇಜಿಂಗ್ನಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಪೇಪರ್ ಬಳಕೆ ಮಾಡಲಿದ್ದು, ಪ್ಯಾಕ್ ಒಳಭಾಗದಲ್ಲಿ ಈ ಪೇಪರ್ ಬಳಕೆಯಾಗಲಿದೆ. ಶೇ.100ರಷ್ಟು ಮರುಬಳಕೆ ಮಾಡಬಹುದಾದ ಪ್ಯಾಕಿಂಗ್ ಅನ್ನು ಮುಂದಿನ ಜೂನ್ ವೇಳೆಗೆ ಜಾರಿಗೆ ತರುವುದಾಗಿ ಸಂಸ್ಥೆ ಹೇಳಿದೆ.
ಪ್ರಸ್ತುತ ಅಮೆಜಾನ್ ಪ್ಯಾಕಿಂಗ್ನಲ್ಲಿ ಶೇ.7ರಷ್ಟು ಏಕಬಳಕೆ ಪ್ಲಾಸ್ಟಿಕ್ ಬಳಸಲಾಗುತ್ತಿದ್ದು, ಈ ಪ್ರಮಾಣವನ್ನು ಮುಂದಿನ ಜೂನ್ ಒಳಗಾಗಿ ಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕಂಪನಿ ತಿಳಿಸಿದೆ.