ನವದೆಹಲಿ: 2020ರ ಏಪ್ರಿಲ್ 26ರಿಂದ ಅಕ್ಷಯ ತೃತೀಯ ಶುರುವಾಗಲಿದೆ. ಈ ದಿನ ಚಿನ್ನ ಖರೀದಿಸಿದರೆ, ಬಾಳೇ ಬಂಗಾರ ಎಂಬ ನಂಬಿಕೆಯು ನಗರ-ಹಳ್ಳಿಗಳಿಗೂ ಹಬ್ಬಿದೆ. ಪ್ರತಿ ವರ್ಷವೂ ಖರೀದಿಯ ಭರಾಟೆ ಏರುಗತಿಯಲ್ಲಿ ಸಾಗುತ್ತಿತ್ತು. ಈ ವರ್ಷಕ್ಕೆ ಕೊರೊನಾ ಅಡ್ಡಗಾಲು ಹಾಕಿದೆ. ಆದರೂ ಮೊಬೈಲ್ ವಾಲೆಟ್ ಕಂಪನಿಗಳು ಆನ್‌ಲೈನ್‌ನಲ್ಲಿ ಚಿನ್ನಾಭರಣ ಖರೀದಿಗೆ ಅವಕಾಶ ಕಲ್ಪಿಸಿವೆ.
ನಾಳೆ (ಭಾನುವಾರ) ನಡೆಯಲಿರುವ ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಅನೇಕರ ಪಾಲಿಗೆ ಶುಭದಿನವಾಗಿದೆ. ಲಾಕ್‌ಡೌನ್ ಕಾರಣಕ್ಕೆ ಚಿನ್ನಾಭರಣಗಳ ನೇರ ಖರೀದಿಗೆ ಅವಕಾಶ ಇಲ್ಲದಂತಾಗಿದೆ.
ಚಿನ್ನದ ವಹಿವಾಟಿನ ಬೆಲೆಯು ಶುಕ್ರವಾರ ಪ್ರತಿ ಗ್ರಾಂ.ಗೆ 315 ರೂ. ಏರಿಕೆಯಾಗಿ 46,742 ರೂ.ಗೆ ತಲುಪಿತ್ತು. ಮಲ್ಟಿ ಕಮಾಡಿಟಿ ವಿನಿಮಯ ಕೇಂದ್ರದಲ್ಲಿ ಜೂನ್ ವಾಯ್ದೆಯ ಗುತ್ತಿಗೆಯ ದರವು ಏರಿಕೆ ದಾಖಲಿಸಿದೆ. ಸತತ ಮೂರನೇ ದಿನವೂ ಬೆಲೆ ಏರಿಕೆ ಕಂಡಿತ್ತು. ಜಾಗತಿಕ ಪೇಟೆಯ ನ್ಯೂಯಾರ್ಕ್‌ನಲ್ಲಿ ಪ್ರತಿ ಔನ್ಸ್‌ಗೆ 1.32 ಲಕ್ಷ ರೂ.ಯಲ್ಲಿ ವಹಿವಾಟು ನಡೆದಿದೆ.