ಮುಂಬೈ:ರಾಷ್ಟ್ರವ್ಯಾಪಿ ಲಾಕ್‌ಡೌನ್ ಮೇ 3ರವರೆಗೆ ವಿಸ್ತರಿಸಿದ್ದರಿಂದ 234.4 ಬಿಲಿಯನ್ ಡಾಲರ್‌ಗಳಷ್ಟು (17.8 ಲಕ್ಷ ಕೋಟಿ ರೂ) ಆರ್ಥಿಕ ನಷ್ಟವಾಗಲಿದ್ದು, 2020ರ ಕ್ಯಾಲೆಂಡರ್ ವರ್ಷದಲ್ಲಿ ಜಿಡಿಪಿ ಸ್ಥಗಿತಗೊಳ್ಳುತ್ತದೆ ಎಂದು ಬ್ರಿಟಿಷ್ ಬ್ರೋಕರೇಜ್ ಅಂದಾಜಿಸಿದೆ.
2020ರ ಕ್ಯಾಲೆಂಡರ್ ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಶೂನ್ಯವಾಗಿರುತ್ತದೆ. ಹಣಕಾಸಿನ ವರ್ಷದ ದೃಷ್ಟಿಕೋನದಿಂದ ನೋಡಿದಾಗ 2021ರಲ್ಲಿ ವೃದ್ಧಿ ದರವು ಶೇ 0.8ರಷ್ಟು ಏರಿಕೆಯಾಗಲಿದೆ ಎಂದು ಬ್ರೋಕರೇಜ್ ಬಾರ್ಕ್ಲೇಸ್ ತಿಳಿಸಿದೆ.
ಕೊರೊನಾ ವೈರಸ್ ಸೋಂಕಿನ ಬೆಳವಣಿಗೆ ತಡೆಗಟ್ಟುವ ಅಗತ್ಯತೆಯನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರಕ್ಕೆ ಕೊನೆಗೊಳ್ಳಬೇಕಿದ್ದ ಮೂರು ವಾರಗಳ ಲಾಕ್‌ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದರು. ಏಪ್ರಿಲ್ 20ರಿಂದ ಸೋಂಕು ಬಾಧಿಸದ ಪ್ರದೇಶಗಳಿಗೆ ವಿನಾಯಿತಿ ನೀಡುವ ಬಗ್ಗೆಯೂ ಸುಳಿವು ನೀಡಿದ್ದಾರೆ. ಆದರೆ, ಇದು ಕಟ್ಟುನಿಟ್ಟಿನ ಮೇಲ್ವಿಚಾರಣೆ ಆಧರಿಸಿದೆ ಎಂದಿದ್ದಾರೆ.
ಮೂರು ವಾರಗಳ ಲಾಕ್‌ಡೌನ್‌ಗೆ 120 ಶತಕೋಟಿ ಡಾಲರ್‌ಗಳಷ್ಟು ಆರ್ಥಿಕ ವೆಚ್ಚ ಆಗಿರಬಹುದು. 234.4 ಬಿಲಿಯನ್ ಡಾಲರ್‌ಗಳಷ್ಟು ಇರಬಹುದು ಎಂದು ಪರಿಷ್ಕೃತವಾಗಿ ಅಂದಾಜಿಸಲಾಗಿದೆ.
2020ರ ಕ್ಯಾಲೆಂಡರ್ ವರ್ಷದಲ್ಲಿ ಭಾರತವು ಶೇ 2.5ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಈ ಹಿಂದೆ ನಿರೀಕ್ಷಿಸಲಾಗಿತ್ತು. ಅದು ಈಗ ಶೂನ್ಯ ಎಂದು ಅಂದಾಜಿಸಲಾಗಿದೆ. ಆದರೆ, 2021ರ ಹಣಕಾಸು ವರ್ಷದ ಬೆಳವಣಿಗೆಯನ್ನು ಹಿಂದಿನ ಶೇ 3.5 ರಿಂದ ಶೇ 0.8ಕ್ಕೆ ಇಳಿಸಲಾಗಿದೆ.
ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಎದುರಿಸಲು ಭಾರತವು ಮೇ 3ರವರೆಗೆ ಸಂಪೂರ್ಣ ಸ್ಥಗಿತಗೊಳ್ಳಲು ಮುಂದಾಗುತ್ತಿದ್ದಂತೆ ಆರ್ಥಿಕ ಪರಿಣಾಮವು ನಾವು ಮೊದಲೇ ನಿರೀಕ್ಷಿಸಿದ್ದಕ್ಕಿಂತ ಕೆಟ್ಟದಾಗಿದೆ ಎಂದು ಬ್ರೋಕರೇಜ್ ಹೇಳಿದೆ.
ನಿರ್ದಿಷ್ಟವಾಗಿ ಗಣಿಗಾರಿಕೆ, ಕೃಷಿ, ಉತ್ಪಾದನೆ ಮತ್ತು ಇತರ ಕ್ಷೇತ್ರಗಳ ಮೇಲೆ ನಕಾರಾತ್ಮಕ ಪರಿಣಾಮವು ನಿರೀಕ್ಷೆಗಿಂತ ಹೆಚ್ಚಾಗಿದೆ. ಜೂನ್ ಆರಂಭದ ವೇಳೆಗೆ ಲಾಕ್‌ಡೌನ್‌ಗಳು ಕೊನೆಗೊಳ್ಳುತ್ತವೆ. ಆರ್ಥಿಕ ಚಟುವಟಿಕೆಯಲ್ಲಿ ಸಾಧಾರಣ ಮಟ್ಟದಲ್ಲಿ ಮರುಚಾಲನೆಗೊಳ್ಳುತ್ತವೆ. ಕೆಲವು ವಲಯಗಳಲ್ಲಿ ದಾಸ್ತಾನು ಪುನರ್ನಿರ್ಮಾಣ ಪ್ರತಿಬಿಂಬಿಸಲಿದೆ ಎಂದು ಎಚ್ಚರಿಸಿದೆ.