ಹೈದರಾಬಾದ್: ಶೀಘ್ರದಲ್ಲೇ ದೇಶಾದ್ಯಂತ ಕಾರು ಮಾಲೀಕರು ಸರ್ಕಾರದ ಹೊಸ ನಿಯಮಗಳ ಪ್ರಕಾರ ಕೆಲವು ಅವಶ್ಯಕತೆಗಳನ್ನು ಪೂರೈಸಿದರೆ ಕಡ್ಡಾಯವಾಗಿ ವಾಹನದಲ್ಲಿ ಹೆಚ್ಚುವರಿ ಟೈರ್ (ಸ್ಟೆಪ್ನಿ) ಇಲ್ಲದೆ ಪ್ರಯಾಣಿಸಬಹುದು.
ಕೇಂದ್ರ ಮೋಟಾರು ವಾಹನ ನಿಯಮ 1989ರಲ್ಲಿನ ತಿದ್ದುಪಡಿಯ ಭಾಗವಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗರಿಷ್ಠ 3.5ರವರೆಗೆ ತೂಕವಿರುವ ಟ್ಯೂಬ್‌ಲೆಸ್ ಟೈರ್‌ಗಳನ್ನು ಅಳವಡಿಸಿರುವ ವಾಹನಗಳಲ್ಲಿ ಸ್ಟೆಪ್ನಿ ಇರಿಸಬೇಕಾಗಿಲ್ಲ ಎಂದು ಸೂಚಿಸಿದೆ. ಟೈರ್ ರಿಪೇರಿ ಕಿಟ್‌ಗಳು ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂಎಸ್) ಅಳವಡಿಸಿಕೊಳ್ಳಬೇಕಿದೆ.
ಸ್ಟೆಪ್ನಿ ಮುಕ್ತ ಸಂಚಾರ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಇರಲಿದೆ. ಇದರಿಂದ ವಾಹನಗಳಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗಲಿದೆ. ಇದು ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ ಹೊಂದಿಸಲೂ ಸಹ ನೆರವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
ವಾಹನಗಳಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (2020ರ ಅಕ್ಟೋಬರ್ 1ರಂದು ಅಥವಾ ನಂತರ ತಯಾರಿಸಲಾದ) ಅಳವಡಿಸಲು ಸರ್ಕಾರದ ಆದೇಶಿಸಿದಂತೆ (ಎಐಎಸ್ 154) ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಿರಬೇಕು.
ಟಿಪಿಎಂಎಸ್, ವಾಹನ ಚಾಲನೆಯಲ್ಲಿ ಇರುವಾಗ ಟೈರ್‌ನ ಹಿಗ್ಗುವಿಕೆಯ ಒತ್ತಡ ಅಥವಾ ಅದರ ಏರುಪೇರಿನ ಮೇಲ್ವಿಚಾರಣೆ ಮಾಡಿ ಮಾಹಿತಿಯನ್ನು ಚಾಲಕನಿಗೆ ರವಾನಿಸುತ್ತದೆ. ಇದರಿಂದಾಗಿ ಚಾಲಕನಿಗೆ ಮುಂಚಿತವಾಗಿ ಮುನ್ನೆಚ್ಚರಿಕೆಯ ಮಾಹಿತಿ ಸಿಗಲಿದ್ದು, ರಸ್ತೆ ಸುರಕ್ಷತೆ ಕಾಪಾಡಿದಂತಾಗುತ್ತದೆ.
ಅಖಿಲ ಭಾರತ ಮೋಟಾರು ಸಾರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಗುಪ್ತಾ ಮಾತನಾಡಿ, ವಾಹನದಿಂದ ಹೆಚ್ಚುವರಿ ಟೈರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವ ತೀರ್ಮಾನವು ಕೇವಲ ಪ್ರಾಯೋಗಿಕ ಆಗಿರಬಾರದು. ಪಂಕ್ಚರ್ ಆದ ಸಂದರ್ಭದಲ್ಲಿ ಚಾಲಕರು ಟೈರ್ ಅನ್ನು ರಿಪೇರಿ ಮಾಡುವುದಕ್ಕಿಂತಲೂ ಸುಲಭವಾಗಿ ಟೈರ್ ಬದಲಿಸುವುದನ್ನು ಕಾಣಬಹುದು. ಈಗ ರಸ್ತೆಯಲ್ಲಿ ಹಲವು ಮಹಿಳಾ ಚಾಲಕರು ಸಹ ಕಾರ್ಯನಿರತವಾಗಿದ್ದಾರೆ. ಈ ಹೆಚ್ಚುವರಿ ಕಿಟ್‌ಗಳ ಬೆಲೆ ನ್ಯಾಯಯುತವಾಗಿ ಇರಬೇಕು. ಗ್ರಾಹಕರ ಶೋಷಣೆ ತಪ್ಪಿಸಲು ಸ್ಪರ್ಧಾತ್ಮಕವಾಗಿ ಇರಿಸಿಕೊಳ್ಳಬೇಕು ಎಂದರು.
ಕೃಷಿ ಟ್ರಾಕ್ಟರ್ ಸೇರಿ ಪ್ರತಿ ಮೋಟಾರು ವಾಹನದ ವಿಂಡ್‌ಸ್ಕ್ರೀನ್ ಮತ್ತು ವಿಂಡೋ ಗಾಜು, ಸುರಕ್ಷತಾ ಅಥವಾ ಮೆರುಗು ವಸ್ತುಗಳಿಂದ ಮಾಡಿರಬೇಕು. ತ್ರಿಚಕ್ರ ವಾಹನಗಳಿಗೆ ಮಾತ್ರ ಇದರಿಂದ ವಿನಾಯಿತಿ ನೀಡಿದೆ. ವಿಂಡೋ ಗಾಜನ್ನು ಅಕ್ರಿಲಿಕ್ ಅಥವಾ ಪ್ಲಾಸ್ಟಿಕ್ ಪಾರದರ್ಶಕ ಹಾಳೆಯಿಂದ ತಯಾರಿಸಬಹುದು ಎಂದಿದೆ.