ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್ ಪ್ರೇರೇಪಿತ ಲಾಕ್‌ಡೌನ್‌ನಿಂದ ಮೊಟಾರು ವಾಹನಗಳ ದಾಖಲೆ ಸಲ್ಲಿಕೆಯ ಅವಧಿಯನ್ನು ಈ ಹಿಂದೆ ಮುಂದೂಡಿದ್ದನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಅವಧಿ ವಿಸ್ತರಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿ ಮತ್ತು ಮೋಟಾರು ವಾಹನಗಳ ದಾಖಲೆಗಳ ಅವಧಿ ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೋಮವಾರ ತಿಳಿಸಿದೆ.
ಹಿಂದಿನ ವಿಸ್ತರಣೆಯು ಸೆಪ್ಟೆಂಬರ್ 30 ರವರೆಗೆ ನಿಗದಿ ಮಾಡಲಾಗಿತ್ತು. ಮಾರ್ಚ್ 30 ಮತ್ತು ಜೂನ್ 9ರ ನಂತರ ಮೂರನೇ ವಿಸ್ತರಣೆಯಾಗಿದೆ.
2020ರ ಫೆಬ್ರುವರಿ 1 ಮತ್ತು 2020ರ ಜೂನ್ 30ರ ಒಳಗೆ ಮುಕ್ತಾಯ ಆಗಲಿರುವ ದಾಖಲೆಪತ್ರಗಳ ಅವಧಿಯು ವಿಸ್ತರಣೆಯಾಗಲಿದೆ. ಮೋಟರ್ ವಾಹನ ಕಾಯ್ದೆ ಮತ್ತು ಸೆಂಟ್ರಲ್ ಮೋಟರ್ ವೆಹಿಕಲ್ ರೂಲ್ಸ್‌ಗೆ ಸಂಬಂಧಿತ ಎಲ್ಲ ದಾಖಲೆಗಳಿಗೆ ಇದು ಅನ್ವಯವಾಗಲಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.
ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ಅಡಿ ವಾಹನಗಳ ಫಿಟ್ನೆಸ್, ಪರವಾನಗಿ, ಪರವಾನಗಿಗಳ ನೋಂದಣಿ ಅಥವಾ ಇತರ ದಾಖಲೆಗಳ ಸಿಂಧುತ್ವವನ್ನು 2020ರ ಡಿಸೆಂಬರ್ 31 ರವರೆಗೆ ವಿಸ್ತರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ವಾಹನಗಳ ಫಿಟ್‌ನೆಸ್, ಪರ್ಮಿಟ್ (ಎಲ್ಲಾ ರೀತಿಯ), ಪರವಾನಗಿ, ನೋಂದಣಿ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು 2020ರ ಸೆಪ್ಟೆಂಬರ್ 30 ರವರೆಗೆ ಮಾನ್ಯ ಎಂದು ಪರಿಗಣಿಸಬಹುದು ಎಂದು ಸೂಚಿಸಲಾಗಿದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ -19 ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.