ಇಂದೋರ್(ಮಧ್ಯ ಪ್ರದೇಶ) :ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, 2024ರ ವೇಳೆಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ತಲುಪುವುದು ಕಷ್ಟ. ಆದರೆ, ಅಸಾಧ್ಯವಲ್ಲ ಎಂದು ಹೇಳಿದ್ದಾರೆ.
ಇಂದೋರ್ ಮ್ಯಾನೇಜ್ಮೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ದೇಶಿಯ ಉತ್ಪಾದನೆ ಹಾಗೂ ಆಮದು ಮೇಲಿನ ಅವಲಂಬನೆ ತಗ್ಗಿಸುವ ಮೂಲಕ ಗುರಿ ಸಾಧಿಸಬಹುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸೇರಿದಂತೆ ಹಲವು ರಾಜ್ಯಗಳ ಸಚಿವರು 2024ರ ವೇಳೆಗೆ ಭಾರತದ ಆರ್ಥಿಕತೆಯು 5 ಟ್ರಿಲಿಯನ್ ಡಾಲರ್ ತಲುಪಲಿದೆ ಎಂಬುದರ ಬಗ್ಗೆ ಮತನಾಡುತ್ತಿದ್ದಾರೆ. ಆದರೆ, ಗಡ್ಕರಿ ಇದು ಕಷ್ಟಸಾಧ್ಯ ಎಂಬ ವ್ಯಾಖ್ಯಾನ ನೀಡಿದ್ದಾರೆ.
ಯಾವುದೇ ಗುರಿ ಸಾಧಿಸಲು ಬಲವಾದ ರಾಜಕೀಯ ಇಚ್ಛಾಶಕ್ತಿ ಬಹಳ ಮುಖ್ಯವಾಗುತ್ತದೆ. ಅದೇ ಇಚ್ಛೆಯನ್ನು ಪ್ರಕಟಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು 5 ಟ್ರಿಲಿಯನ್ ಡಾಲರ್ಗೆ ಕೊಂಡೊಯ್ಯುವ ಗುರಿ ಇರಿಸಿಕೊಂಡಿದ್ದಾರೆ. ಈ ಗುರಿ ಕಷ್ಟ. ಆದರೆ, ಅಸಾಧ್ಯವಲ್ಲ ಎಂದು ಅವರು ಹೇಳಿದರು.
ನಮ್ಮ ದೇಶದಲ್ಲಿ ಸಾಕಷ್ಟು ಸಂಪನ್ಮೂಲಗಳು ಮತ್ತು ಉತ್ಪಾದನೆಯ ಸಾಮರ್ಥ್ಯ ಇದೆ. ಅದರ ಹೊರತಾಗಿಯೂ ನಾವು ಪ್ರತಿವರ್ಷ ಔಷಧಿಗಳು, ವೈದ್ಯಕೀಯ ಸಾಧನಗಳು, ಕಲ್ಲಿದ್ದಲು, ತಾಮ್ರ, ಪತ್ರಿಕೆಗಳು ಸೇರಿದಂತೆ ಇತರೆ ಸರಕುಗಳಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದೇವೆ ಎಂದರು.