ವಾಷಿಂಗ್ಟನ್:ಚೀನಾದ 34 ಶತಕೋಟಿ ಡಾಲರ್ ಮೌಲ್ಯದ ಆಮದು ವಸ್ತುಗಳ ಮೇಲೆ ಅಮೆರಿಕ ಸುಂಕ ನೀತಿ ಜಾರಿಯಾಗಿ ತಿಂಗಳು ಕಳೆಯುವ ಮೊದಲೇ ಮತ್ತೆ 300 ಬಿಲಿಯನ್ ಡಾಲರ್ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 10ರಷ್ಟು ಸುಂಕ ವಿಧಿಸಿದೆ.
ಉಭಯ ರಾಷ್ಟ್ರಗಳ ನಡುವೆ ಉದ್ಭವಿಸಿರುವ ವಾಣಿಜ್ಯ ಸಮರದ ಮಾತುಕತೆಯ ಕುರಿತು ಸಕಾರಾತ್ಮಕ ಒಪ್ಪಂದಕ್ಕೆ ಬರುವುದರಲ್ಲಿ ಚೀನಾ ಗಂಭೀರವಾಗಿಲ್ಲ ಮತ್ತು ಅಮೆರಿಕದ ಕೃಷಿ ಉತ್ಪನ್ನಗಳನ್ನು ಖರೀದಿಸುವ ಭರವಸೆ ಉಳಿಸಿಕೊಳ್ಳುವಲ್ಲಿ ಅದು ವಿಫಲವಾಗಿದೆ. ಹೀಗಾಗಿ, ಆ ದೇಶದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಲಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪಾದಿಸಿದ್ದಾರೆ.
ಸುಂಕ ಏರಿಕೆಯ ಸ್ಪಷ್ಟನೆಯ ಕುರಿತು ಸರಣಿ ಟ್ವೀಟ್ ಮಾಡಿದ ಟ್ರಂಪ್, ನೂತನ ಸುಂಕವು ಈ ಹಿಂದೆ ಜಾರಿಯಲ್ಲಿದ್ದ 250 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ಮೇಲಿನ ಶೇ 25ರಷ್ಟು ಸುಂಕದ ಜೊತೆಗೆ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಿದರು.
ನಾವು ಮೂರು ತಿಂಗಳ ಹಿಂದೆಯೇ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ, ದುಃಖಕರ ಸಂಗತಿಯೆಂದರೆ ಸಹಿ ಹಾಕುವ ಮೊದಲು ಚೀನಾ ಒಪ್ಪಂದವನ್ನು ಮರು ಮಾತುಕತೆ ನಡೆಸಲು ನಿರ್ಧರಿಸಿತು. ಇತ್ತೀಚೆಗೆ ಚೀನಾ, ಅಮೆರಿಕದ ಕೃಷಿ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಒಪ್ಪಿಕೊಂಡಿತು. ಆದರೆ, ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳುವಲ್ಲಿ ಅದು ವಿಫಲವಾಗಿದೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ನನ್ನ ಸ್ನೇಹಿತ (ಚೀನಾ) ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಫೆಂಟನಿಲ್ ಮಾರಾಟವನ್ನು ನಿಲ್ಲಿಸುವುದಾಗಿ ಹೇಳಿದ್ದರು. ಆದರೆ, ಇದು ಇಂದಿಗೂ ಸಂಭವಿಸಲಿಲ್ಲ. ಚೀನಾದ ನಡೆಯಿಂದ ಅನೇಕ ಅಮೆರಿಕನ್ನರು ಸಾಯುತ್ತಲೇ ಇದ್ದಾರೆ ಎಂದು ಟ್ವಿಟ್ಟರ್ನಲ್ಲಿ ಆಪಾದಿಸಿದ್ದಾರೆ.