ನವದೆಹಲಿ:ಅಮೆರಿಕ-ಚೀನಾ ನಡುವಿನ ವಾಣಿಜ್ಯ-ವಹಿವಾಟು ಸಂಘರ್ಷ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಹಣಕಾಸು ಮಾರುಕಟ್ಟೆಯನ್ನು ಅಲುಗಾಡಿಸುತ್ತಿದೆ.
ಆರ್ಥಿಕ ಹಿಂಜರಿತ ಸಂಭವಿಸಿದ್ರೆ, ಏಷ್ಯಾದ ರಾಷ್ಟ್ರಗಳ ಮೇಲೆ ಏಕಕಾಲಕ್ಕೆ ಪರಿಣಾಮ ಬೀರುವುದಿಲ್ಲ ನಿಜ, ಆದರೆ ನಿಧಾನವಾಗಿ ಇದು ತನ್ನ ಕಬಂಧ ಬಾಹುಗಳನ್ನು ಏಷ್ಯಾದ ಸಣ್ಣ ಅರ್ಥಿಕತೆ ಹೊಂದಿರುವ ದೇಶಗಳನ್ನು ನುಂಗಿ ಹಾಕುವ ಭೀತಿ ಎದುರಾಗಿದೆ. ಮುಖ್ಯವಾಗಿ ಹಾಂಕಾಂಗ್ ಮತ್ತು ಸಿಂಗಾಪುರದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ವ್ಯಾಪಾರ ಪೈಪೋಟಿಯಲ್ಲಿ ಏಷ್ಯಾದ ಕೆಲ ರಾಷ್ಟ್ರಗಳು ಮುಗ್ಧ ಪ್ರೇಕ್ಷಕರಾಗಲಿದ್ದಾರೆ. ಆ ರಾಷ್ಟ್ರಗಳದ್ದು ಸಣ್ಣ, ಮುಕ್ತ ಆರ್ಥಿಕತೆಗಳಾಗಿದ್ದು, ಅಲ್ಲಿನ ವ್ಯಾಪಾರ-ವಹಿವಾಟು ಚೀನಾದೊಂದಿಗೆ ಬೆಸೆದುಕೊಂಡಿದೆ. ಇವುಗಳು ಏಷ್ಯಾದ ದೊಡ್ಡ ರಾಷ್ಟ್ರಗಳ ಆರ್ಥಿಕತೆಯನ್ನೂ ಬಲಿ ಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ.
ವಿಶ್ವದ 2ನೇ ಅತೀ ದೊಡ್ಡ ಆರ್ಥಿಕ ರಾಷ್ಟ್ರ ಚೀನಾದ ಸಂಪತ್ತಿನಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಸಕ್ತ ವರ್ಷದ 2ನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ದರ ಶೇ 6.2ರಷ್ಟಿದೆ. ಇದು 1990ರ ಬಳಿಕ ಅತ್ಯಂತ ಕಡಿಮೆ ಬೆಳವಣಿಗೆಯದ್ದು. ಅಮೆರಿಕದ ಸುಂಕ ಏರಿಕೆಯೂ ಇದರ ಮೇಲೆ ಇನ್ನಷ್ಟು ಪ್ರಭಾವ ಬೀರಿದೆ.
ಏಷ್ಯಾದ ಮತ್ತೊಂದು ಪ್ರಬಲ ಶಕ್ತಿ ಭಾರತವೂ ಆರ್ಥಿಕ ಹೊಡೆತದಿಂದ ಹೊರತಾಗಿಲ್ಲ. ಭಾರತದ ಇತ್ತೀಚಿನ ಆರ್ಥಿಕ ವೃದ್ದಿ ದರ ಕಳೆದ ಐದು ವರ್ಷಗಳಲ್ಲಿ ಕಡಿಮೆಯದಾಗಿದ್ದು, ಶೇ 5.8ಕ್ಕೆ ತಲುಪಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಮಂದಗತಿಯ ಬೆಳವಣಿಗೆ ಮುಂದುವರೆದಿದ್ದು, ಪ್ರಯಾಣಿಕ ವಾಹನಗಳ ಮಾರಾಟ ಶೇ 31ರಷ್ಟು ಇಳಿಕೆಯಾಗಿದೆ. ಇದರಿಂದಾಗಿ ಕೇಂದ್ರೀಯ ಬ್ಯಾಂಕ್ ಬಡ್ಡಿ ದರ ಕಡಿತದ ಮೊರೆ ಹೋಗುತ್ತಿದೆ.