ವಾಷಿಂಗ್ಟನ್: ತನ್ನ ಗಡಿಯಲ್ಲಿ ಭಯೋತ್ಪಾದಕರನ್ನು ಪೋಷಣೆ ಮಾಡುತ್ತಿರುವ ಪಾಕ್, ಅವರಿಗೆ ಸಾಕಷ್ಟು ಹಣಕಾಸಿನ ನೆರವನ್ನು ಸಹ ನೀಡುತ್ತಿದೆ. ಈ ಮಧ್ಯೆ ಅಮೆರಿಕ ತೆರೆಮರೆಯಲ್ಲಿ ಉಗ್ರರ ಆರ್ಥಿಕ ನೆರವಿಗೆ ಕತ್ತರಿ ಹಾಕುತ್ತಿದೆ.
ವಿದೇಶಿ ನೆಲದ ಭಯೋತ್ಪಾದಕ ಸಂಘಟನೆಗಳ ನಿಯಂತ್ರಣ ಭಾಗವಾಗಿ 2019ರಲ್ಲಿ ಪಾಕಿಸ್ತಾನ ಮೂಲದ ಸಂಘಟನೆಗಳು ಸೇರಿ ಉಗ್ರರ ಗುಂಪುಗಳಿಗೆ ಸೇರಬೇಕಿದ್ದ 63 ಮಿಲಿಯನ್ ಡಾಲರ್ ಹಣಕಾಸಿನ ನೆರವನ್ನು ಅಮೆರಿಕ ನಿರ್ಬಂಧಿಸಿದೆ ಎಂದು ಯುಎಸ್ ಖಜಾನೆ ಇಲಾಖೆಯ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ಯುಎಸ್ ಖಜಾನೆ ಇಲಾಖೆ ಗುರುವಾರ ಬಿಡುಗಡೆ ಮಾಡಿದ ವರದಿ ಅನ್ವಯ, ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) 3,42,000 ಡಾಲರ್, ಜೈಶ್-ಎ ಮೊಹಮ್ಮದ್ನ (ಜೆಎಂ) 1,725 ಡಾಲರ್ ಮತ್ತು ಹರ್ಕತ್-ಉಲ್- ಮುಜಾಹಿದ್ದೀನ್-ಅಲ್-ಇಸ್ಲಾಮಿನ 45,798 ಡಾಲರ್‌ಗಳ ನಿಧಿಯನ್ನು ನಿರ್ಬಂಧಿಸಿದೆ ಎಂದು ಹೇಳಿದೆ.
ಇದನ್ನೂ ಓದಿ: ಸೀತಾರಾಮನ್ ಗತ್ತು, ತೆರಿಗೆದಾರರ ತಾಕತ್ತು: ಖಜಾನೆಗೆ ಬಂತು ದಾಖಲೆಯ 1.15 ಲಕ್ಷ ಕೋಟಿ ರೂ. GST
ಈ ಮೂರೂ ಗುಂಪುಗಳು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾಗಿವೆ. ಹರ್ಕತ್-ಉಲ್-ಮುಜಾಹಿದ್ದೀನ್-ಅಲ್-ಇಸ್ಲಾಮಿ ಇಸ್ಲಾಮಿಕ್ ಜಿಹಾದ್ ಗುಂಪು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪಾಕಿಸ್ತಾನ ಮೂಲದ ಮತ್ತೊಂದು ಕಾಶ್ಮೀರ ಕೇಂದ್ರಿತ ಭಯೋತ್ಪಾದಕ ಸಂಘಟನೆಯಾದ ಹಿಜ್ಬುಲ್ ಮುಜಾಹಿದ್ದೀನ್ಗೆ 2019ರಲ್ಲಿ 4,321 ಡಾಲರ್ ನಷ್ಟು ಹಣಕಾಸಿನ ನೆರವು ತಡೆಯಲಾಗಿದೆ. ಹಿಂದಿನ ವರ್ಷ 2,287 ಡಾಲರ್ಗಳಷ್ಟಿತ್ತು ಎಂದು ವರದಿ ತಿಳಿಸಿದೆ.
ತೆಹ್ರಿಕ್-ಇ ತಾಲಿಬಾನ್ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ 2019ರಲ್ಲಿ 5,067 ಡಾಲರ್ ನಿರ್ಬಂಧಿಸಿದೆ. ಖಜಾನೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (ಒಎಫ್‌ಎಸಿ) ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದನೆ ಬೆಂಬಲಿತ ರಾಷ್ಟ್ರಗಳ ಆಸ್ತಿಗಳ ವಿರುದ್ಧ ನಿರ್ಬಂಧಗಳನ್ನು ಜಾರಿಗೊಳಿಸುವ ಹೊಣೆಗಾರಿಕ ಹೊಂದಿರುವ ಯುಎಸ್ ಸರ್ಕಾರದ ಪ್ರಮುಖ ಸಂಸ್ಥೆಯಾಗಿದೆ. ವರದಿಯ ಪ್ರಕಾರ, 2019ರಲ್ಲಿ ಅಮೆರಿಕ ಸುಮಾರು 70 ಭಯೋತ್ಪಾದಕ ಸಂಘಟನೆಗಳ ನಿಧಿಯಲ್ಲಿ 63 ಮಿಲಿಯನ್ ಡಾಲರ್ನಷ್ಟು ನಿರ್ಬಂಧಿಸಿದೆ.