ನವದೆಹಲಿ: ಮುಂಬರುವ 2020ರ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ಬಂಡವಾಳ ಲಾಭದ ಎಲ್ಲ ಆಸ್ತಿ ವರ್ಗಗಳ ಈಕ್ವಿಟಿ, ಸ್ವತ್ತು ಮತ್ತು ಚಿನ್ನದ ತೆರಿಗೆಗೆ ಏಕರೂಪದ ಚೌಕಟ್ಟು ರೂಪಿಸುವ ಸಾಧ್ಯತೆಯಿದೆ.
ಷೇರುಗಳ ಮೇಲಿನ ದೀರ್ಘ ಕಾಲದ ಬಂಡವಾಳ ಲಾಭದ (ಎಲ್‌ಟಿಸಿಜಿ) ತೆರಿಗೆಯನ್ನು ಸರ್ಕಾರ ತೆಗೆಯಬಹುದು ಎಂಬ ಚರ್ಚೆ ನಡೆಯುತ್ತಿವೆ. ಇದರ ಜೊತೆಗೆ ಎಲ್‌ಟಿಸಿಜಿ ಅವಧಿಯನ್ನು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಏರಿಸಬಹುದು. ಸದ್ಯದ ನಿಯಮದ ಪ್ರಕಾರ ಷೇರುಗಳನ್ನು ಒಂದು ವರ್ಷದ ನಂತರ ಮಾರಾಟ ಮಾಡಿದರೆ ಅದಕ್ಕೆ ಎಲ್‌ಟಿಸಿಜಿ ತೆರಿಗೆ ಶೇ 10ರಷ್ಟು ಹಾಗೂ ಸೆಸ್ ಹಾಕಲಾಗುತ್ತದೆ. ಈ ನಿಯಮವನ್ನು ಸಡಿಲಿಸಿದರೇ ಈಕ್ವಿಟಿ ಷೇರು ಹಾಗೂ ಈಕ್ವಿಟಿ ಮ್ಯೂಚುವಲ್ ಫಂಡ್ಗಳ ಮೇಲೆ ಹೂಡಿಕೆ ಮಾಡುವವರಿಗೆ ಅನುಕೂಲವಾಗಲಿದೆ.
ದೀರ್ಘಾವಧಿಯ ಬಂಡವಾಳ ಲಾಭಗಳ (ಎಲ್‌ಟಿಸಿಜಿ ) ಎಲ್ಲ ಆಸ್ತಿಯ ವರ್ಗಗಳಿಗೆ ತೆರಿಗೆಯನ್ನು 24 ತಿಂಗಳು ಅಥವಾ ಎರಡು ವರ್ಷಗಳಲ್ಲಿ ಏಕರೂಪವಾಗಿ ನಿಗದಿಪಡಿಸುವ ಪ್ರಸ್ತಾವನೆ ಇದೆ. ಈಕ್ವಿಟಿಗೆ 1 ವರ್ಷ, ಆಸ್ತಿಗೆ 2 ವರ್ಷ ಮತ್ತು ಚಿನ್ನಕ್ಕೆ 3 ವರ್ಷಗಳ ಎಲ್‌ಟಿಸಿಜಿ ನಿಗದಿಪಡಿಸಲಾಗಿದೆ. ಎಲ್‌ಟಿಸಿಜಿ ತೆರಿಗೆಯು ಪರಿಣಾಮಕಾರಿಯಾದ ಬದಲಾವಣೆ ಕಾಣಬಹುದು ಎನ್ನಲಾಗುತ್ತಿದೆ.
ಆಸ್ತಿಯ ವರ್ಗಗಳು ಹೆಚ್ಚು-ಕಡಿಮೆ ದೇಶದ ಹೂಡಿಕೆಯ ವಾತಾವರಣದ ವ್ಯವಸ್ಥೆಯನ್ನು ಭದ್ರಪಡಿಸುತ್ತವೆ ಮತ್ತು ಎಲ್‌ಟಿಸಿಜಿಯಲ್ಲಿ ಪಾರದರ್ಶಕತೆ ಪರಿಚಯಿಸುತ್ತದೆ. ಹೂಡಿಕೆದಾರರಿಗೆ ಆಡಳಿತದ ಸ್ಪಷ್ಟತೆ ಮತ್ತು ಸರಳತೆ ಒದಗಿಸಿದಂತಾಗುತ್ತದೆ.
ಚಿನ್ನವನ್ನು 3 ವರ್ಷಗಳ ನಂತರ ಮಾರಾಟ ಮಾಡಿದರೇ ದೀರ್ಘಾವಧಿಯ ಬಂಡವಾಳ ಲಾಭ ಮತ್ತು ಶೇ 20ರಷ್ಟು ಇಂಡೆಕ್ಸ್ ಪ್ರಯೋಜನ ವಿಧಿಸಲಾಗುತ್ತದೆ. ಅಲ್ಪಾವಧಿಯ ಬಂಡವಾಳ ಲಾಭವನ್ನು ಚಿನ್ನದ ಮಾರಾಟದ 3 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ವಿಧಿಸಲಾಗುತ್ತದೆ. ಇದನ್ನು ಮೌಲ್ಯಮಾಪನ ತೆರಿಗೆ ಸ್ಲ್ಯಾಬ್ ಪ್ರಕಾರ ವಿಧಿಸಲಾಗುತ್ತದೆ. ಚಿನ್ನದ ಸರ, ಆಭರಣ, ನಾಣ್ಯ ಅಥವಾ ಇತರ ಯಾವುದೇ ರೀತಿಯ ಅಮೂಲ್ಯವಾದ ಹಳದಿ ಲೋಹ ಮಾರಾಟವು ಬಂಡವಾಳ ಲಾಭದ ಅಡಿಯಲ್ಲಿ ಯಥೇಚ್ಛ ತೆರಿಗೆಯನ್ನು ಆಕರ್ಷಿಸುತ್ತದೆ.
ಆದಾಯ ತೆರಿಗೆಯ ಕ್ಯಾಪಿಟಲ್ ಗೇನ್ಸ್ ಅಡಿ ಚಿನ್ನದ ಹಿಡುವಳಿ ಮಾರಾಟದ ಲಾಭಾಂಶ ತೆರಿಗೆ ವಿಧಿಸಲಾಗುತ್ತದೆ. ಇದರ ಹೊರತಾಗಿ ಚಿನ್ನ ವಿತರಕರು ತಮ್ಮ ವ್ಯವಹಾರದ ಭಾಗವಾಗಿ ಚಿನ್ನದಲ್ಲಿ ವಹಿವಾಟು ನಡೆಸಿದರೆ ಅಂತಹ ವಹಿವಾಟಿನ ಮೇಲಿನ ಲಾಭವನ್ನು 'ವ್ಯವಹಾರ ಅಥವಾ ವೃತ್ತಿಯಿಂದ ಬರುವ ಆದಾಯ'ದ ಅಡಿಯಲ್ಲಿಯೂ ತೆರಿಗೆ ವಿಧಿಸಲಾಗುತ್ತದೆ.
ಆಸ್ತಿಯನ್ನು 24 ತಿಂಗಳೊಳಗೆ ಮಾರಾಟ ಮಾಡಿದರೆ, ಒಬ್ಬ ವ್ಯಕ್ತಿಯ ಆದಾಯ ತೆರಿಗೆ ಸ್ಲ್ಯಾಬ್‌ನ ಪ್ರಕಾರ ಲಾಭದ ಮೇಲೆ ಅಲ್ಪಾವಧಿ ಬಂಡವಾಳದ ಲಾಭದ ತೆರಿಗೆಯನ್ನು (ಎಸ್‌ಟಿಸಿಜಿ) ಪಾವತಿಸಬೇಕಾಗುತ್ತದೆ.
24 ತಿಂಗಳ ನಂತರ ಮಾರಾಟ ಮಾಡಿದರೇ ಎಲ್‌ಟಿಸಿಜಿ ತೆರಿಗೆ ಪಾವತಿಸಬೇಕಾಗುತ್ತದೆ. ಇಂಡೆಕ್ಸ್ ಪ್ರಯೋಜನದೊಂದಿಗೆ ಶೇ 20ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ಮಾರಾಟವಿದ್ದರೆ ಮತ್ತು ಇನ್ನೊಂದನ್ನು ಖರೀದಿಸಿದರೆ ಸೆಕ್ಷನ್ 54, ಇದಕ್ಕೆ ವಿನಾಯಿತಿ ನೀಡುತ್ತದೆ. ಆಸ್ತಿ ಮಾರಾಟದಿಂದ ಬಂಡವಾಳದ ಲಾಭವನ್ನು ಗರಿಷ್ಠ ಎರಡು ಮನೆಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಮರುಹೂಡಿಕೆ ಮಾಡಿದಾಗ ಸೆಕ್ಷನ್ 54ರ ಅಡಿಯಲ್ಲಿ ರಿಯಾಯಿತಿ ನೀಡಲಾಗುತ್ತದೆ. ಆದರೆ, ಬಂಡವಾಳದ ಲಾಭ ಎರಡು ಆಸ್ತಿಗಳಲ್ಲಿ ಮರುಹೂಡಿಕೆ ಮಾಡಲು ವಿನಾಯಿತಿ ಪಡೆಯಲು ಮನೆ ಆಸ್ತಿಯ ಮಾರಾಟವು 2 ಕೋಟಿ ರೂ. ಮೀರಬಾರದು.