ನವದೆಹಲಿ: ದೇಶದ 2,200 ಆದಾಯ ತೆರಿಗೆ ಪಾವತಿದಾರರು ಮಾತ್ರ ತಮ್ಮ ಆದಾಯ 1 ಕೋಟಿ ರೂ.ಗಿಂತ ಹೆಚ್ಚಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸುತ್ತಿದ್ದಾರೆ.
ಈ ಕುರಿತು ಪತ್ರಕರ್ತರೂ ಸೇರಿದಂತೆ ಕೆಲವು ಟ್ವಿಟ್ಟರ್ ಬಳಕೆದಾರರು ಪ್ರಧಾನಿಗಳಿಗೆ ಸರಣಿ ಪ್ರಶ್ನೆಗಳನ್ನು ಹಾಕಿದ್ದಾರೆ. ಪ್ರಧಾನಿಯವರು ತಪ್ಪು ಮಾಹಿತಿ ನೀಡಿದ್ದಕ್ಕೆ ಯಾರು ದೂಷಿಸುತ್ತಾರೆ? ಸತ್ಯಾಸತ್ಯತೆಗಳನ್ನು ಪರಿಶೀಲಿಸದೆ ತಪ್ಪಾಗಿ ಉಲ್ಲೇಖಿಸಿದ್ದಾರೆಯೇ? ಎಂದು ಪ್ರಶ್ನಿಸುತ್ತಿದ್ದಾರೆ.
ಪ್ರಧಾನಿ ಮೋದಿ ಹೇಳಿದ್ದೇನು?
130 ಕೋಟಿಗೂ ಹೆಚ್ಚು ಜನರಿರುವ ದೇಶದಲ್ಲಿ ಕೇವಲ 1.5 ಕೋಟಿ ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ. ಅವರಲ್ಲಿಯೂ ಕೇವಲ 3 ಲಕ್ಷ ಜನರು ಮಾತ್ರ ತಮ್ಮ ಆದಾಯವನ್ನು 50 ಲಕ್ಷ ರೂ.ಗಿಂತ ಹೆಚ್ಚಿದೆ ಎಂದು ಘೋಷಿಸಿದ್ದಾರೆ ಎಂದು ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸುದ್ದಿವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಗುರುವಾರ ಹೇಳಿಕೆ ನೀಡಿದ್ದರು.
ಈ ಬಗ್ಗೆ ಮುಂದುವರಿದು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅಸಂಖ್ಯಾತ ವೃತ್ತಿಪರರು, ವೈದ್ಯರು, ಎಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಬಾಲಿವುಡ್ ಕಲಾವಿದರು, ವಕೀಲರು, ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಂತಹ ವೃತ್ತಿಪರರಿಂದ ತುಂಬಿದ್ದಾರೆ. ಆದರೆ, ಅವರು ಘೋಷಿಸಿಕೊಂಡ ಆದಾಯ ತೆರಿಗೆ ಪಾವತಿ ಮೊತ್ತ ಕೇಳಿಸಿಕೊಂಡರೇ ನೀವು ಆಘಾತಕ್ಕೊಳಗಾಗುತ್ತೀರಾ! ಕೇವಲ 2,200 ಮಂದಿ ಮಾತ್ರ ತಮ್ಮ ವಾರ್ಷಿಕ ಆದಾಯವನ್ನು 1 ಕೋಟಿ ರೂ.ಗಿಂತ ಅಧಿಕ ಇದೆಯೆಂದು ಘೋಷಿಸಿಕೊಂಡಿದ್ದಾರೆ ಎಂದರು.