ನವದೆಹಲಿ:ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊಸ ನಿಯಮದ ಕರಡು ಅಧಿಸೂಚನೆ ಬಿಡುಗಡೆ ಮಾಡಿದೆ. ಸರ್ಕಾರಿ ಇಲಾಖೆಗಳಿಗೆ ಸೇರಿದ 2022ರ ಏಪ್ರಿಲ್ 1 ರಿಂದ15 ವರ್ಷಕ್ಕಿಂತ ಹಳೆಯದಾದ ವಾಹನಗಳ ನೋಂದಣಿ ನವೀಕರಿಸಲು ಸಾಧ್ಯವಾಗುವುದಿಲ್ಲ ಎಂದಿದೆ.
ಹೊಸ ನಿಯಮಗಳನ್ನು ಪರಿಶೀಲಿಸಲು ಮತ್ತು ತಿದ್ದುಪಡಿ ಮಾಡಲು ಸಚಿವಾಲಯವು ಮಧ್ಯಸ್ಥಗಾರರ ಅಭಿಪ್ರಾಯ ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಹೊಸ ಅಧಿಸೂಚನೆಯ ಪ್ರಕಾರ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಕೇಂದ್ರ ಪ್ರದೇಶಗಳು, ಪಿಎಸ್ಯುಗಳು, ಪುರಸಭೆ ಮತ್ತು ಸ್ವಾಯತ್ತ ಸಂಸ್ಥೆಗಳನ್ನು ಒಳಗೊಂಡಿರುವ ಎಲ್ಲಾ ಸರ್ಕಾರಿ ವಾಹನಗಳಿಗೆ 15 ವರ್ಷಗಳ ಗಡುವು ಅನ್ವಯವಾಗುತ್ತದೆ.
2022ರ ಏಪ್ರಿಲ್ 1ರಿಂದ ಸರ್ಕಾರಿ ಇಲಾಖೆಗಳು ತಮ್ಮ ವಾಹನಗಳ ನೋಂದಣಿ ಪ್ರಮಾಣಪತ್ರವನ್ನು 15 ವರ್ಷಗಳ ನಂತರ ನವೀಕರಿಸಲು ಸಾಧ್ಯವಾಗುವುದಿಲ್ಲ. ಇದು ಎಲ್ಲ ಕೇಂದ್ರ, ರಾಜ್ಯ, ಯುಟಿ, ಪಿಎಸ್ಯುಗಳು, ಪುರಸಭೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
2021-22ರ ಫೆಬ್ರವರಿ 1ರಂದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯಡಿ ಜಾರಿಗೆ ಬರಲಿದೆ. ಪರ್ಸನಲ್ ವಾಹನಗಳಿಗೆ ಫಿಟ್‌ನೆಸ್ ಪರೀಕ್ಷೆ 20 ವರ್ಷಗಳ ನಂತರ ಮತ್ತು ವಾಣಿಜ್ಯ ವಾಹನಗಳು 15 ವರ್ಷಗಳ ಬಳಿಕ ಅಗತ್ಯ ಇರುತ್ತದೆ.
ಇದನ್ನೂ ಓದಿ: ಹೊಸ ಫೀಚರ್ ಹೊರತಂದ ಗೂಗಲ್ ಮ್ಯಾಪ್: ಏನದು, ಉಪಯೋಗಿಸುವುದು ಹೇಗೆ?
ಕರಡು ನಿಯಮಗಳ ಅಧಿಸೂಚನೆಯನ್ನು ಮಾರ್ಚ್ 12ರಂದು ಸಚಿವಾಲಯ ಹೊರಡಿಸಿದ್ದು, ಮೂವತ್ತು ದಿನಗಳಲ್ಲಿ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆ, ಆಕ್ಷೇಪಣೆ ಮತ್ತು ಸಲಹೆಗಳನ್ನು ಕೋರಿದೆ. ಸರ್ಕಾರಿ ವಾಹನಗಳಿಗೆ 15 ವರ್ಷಗಳ ನಂತರ ನೋಂದಣಿ ಪ್ರಮಾಣಪತ್ರ ನವೀಕರಿಸಲಾಗುವುದಿಲ್ಲ ಎಂದು ಹೇಳಿದೆ.