ನವದೆಹಲಿ:ಟೋಲ್ ವ್ಯವಸ್ಥೆ ಕೊನೆಗೊಳ್ಳುವುದಿಲ್ಲ. ಜನರಿಗೆ ಉತ್ತಮವಾದ ಸೇವೆಗಳು ಬೇಕೆಂದರೆ ಹಣ ಪಾವತಿಸಲೇಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.
ಲೋಕಸಭೆಯಲ್ಲಿ ರಸ್ತೆ ಹಾಗೂ ಹೆದ್ದಾರಿಗೆ ಮೀಸಲಿಟ್ಟ ಅನುದಾನದ ಕುರಿತು ಮಾತನಾಡಿದ ಅವರು, ಸರ್ಕಾರದ ಬಳಿ ಹಣವಿಲ್ಲ. ಟೋಲ್ ವ್ಯವಸ್ಥೆ ಎಂದಿಗೂ ಕೊನೆಗೊಳ್ಳುವಂತಹದಲ್ಲ. ಸಮಯದಿಂದ ಸಮಯಕ್ಕೆ ವಸೂಲಾತಿ ಮೊತ್ತ ಬದಲಾಗುತ್ತದೆ. ಉತ್ತಮವಾದ ಸೇವೆಗಳು ಬೇಕಾದರೆ ಟೋಲ್ ಹಣ ಕಟ್ಟಬೇಕು ಎಂದು ತಿಳಿಸಿದರು.
ಪಾವತಿಸಲು ಸಮರ್ಥರಿರುವ ಸ್ಥಳಗಳಲ್ಲಿ ಮಾತ್ರ ಟೋಲ್ ವಸೂಲಿ ಮಾಡಲಾಗುತ್ತಿದೆ, ಈ ಮೂಲಕ ಗ್ರಾಮೀಣ ಮತ್ತು ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಒಂದುವರೆ ಗಂಟೆ ಮಾತನಾಡಿದ ಗಡ್ಕರಿ, ಕಳೆದ 5 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 40 ಸಾವಿರ ಕಿ.ಮೀ. ಹೆದ್ದಾರಿ ನಿರ್ಮಿಸಿದೆ. ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಇದು ಭಯೋತ್ಪಾದನೆ ದಾಳಿಗೆ ಬಲಿಯಾದವರ ಸಂಖ್ಯೆಗಿಂತ ಅಧಿಕವಾಗಿದೆ ಎಂದರು.