ದೇಶದ ಬಳಕೆಯ ಪ್ರಮಾಣವನ್ನು ಭವಿಷ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಯತ್ತ ತಿರುಗಿಸುವಲ್ಲಿ ಮೂರು ನಿರ್ಣಾಯಕ ಸವಾಲುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಜನವರಿ 2019 ರಲ್ಲಿ ಬಿಡುಗಡೆಗೊಂಡಿದ್ದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಆರ್ಥಿಕ ಒಳನೋಟ ವರದಿಯು ಹೇಳುತ್ತದೆ. ಅವುಗಳೆಂದರೆ: (ಎ) ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ; (ಬಿ) ಗ್ರಾಮೀಣ ಭಾರತದ ಸಾಮಾಜಿಕ ಆರ್ಥಿಕ ಸೇರ್ಪಡೆ; (ಸಿ) ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯ. ಒಂದು ವರ್ಷದ ಹಿಂದೆಯೇ ವರದಿಯನ್ನು ಪ್ರಕಟಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಮೂರು ನಿರ್ಣಾಯಕ ಸವಾಲುಗಳನ್ನು ಎದುರಿಸಲು ನಾವು ತೆಗೆದುಕೊಂಡ ಕ್ರಮಗಳು ಮತ್ತು ಮತ್ತು ಉಪಕ್ರಮಗಳು ಹಾಗೂ ಅದರ ಪ್ರಗತಿಯ ಕುರಿತು ಇಲ್ಲಿ ವಿಶ್ಲೇಷಿಸೋಣ.
ಈ ಸವಾಲುಗಳ ಕುರಿತು ಅವಲೋಕನ ನಡೆಸುವ ಮೊದಲು, ಕಳೆದ ಒಂದು ವರ್ಷದಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆ ಹೇಗಿದೆ ಎಂಬುದನ್ನು ಗಮನಿಸುವುದು ಬಹು ಮುಖ್ಯವಾಗುತ್ತದೆ. ದೇಶದ ತ್ರೈಮಾಸಿಕ ಜಿಡಿಪಿ ಬೆಳವಣಿಗೆಯ ದರವು 2018-19ರ ಮೊದಲ ತ್ರೈಮಾಸಿಕದಲ್ಲಿ 8.0%ರಷ್ಟಿತ್ತು. ಆದರೆ ಅದು ಪ್ರಸ್ತಕ ಆರ್ಥಿಕ ವರ್ಷ 2019-20ರ ಮೊದಲ ತ್ರೈಮಾಸಿಕದಲ್ಲಿ ಶೇ.5ಕ್ಕೆ ಮತ್ತು ದ್ವಿತೀಯ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಇಳಿದಿದೆ. ಡಬ್ಲ್ಯುಇಎಫ್‌ನ ವರದಿಯಲ್ಲಿ 2019ರ ಭಾರತದ ಜಿಡಿಪಿ ಬೆಳವಣಿಗೆಯ ದರವು ಸುಮಾರು 7.5%ರಷ್ಟಿರುತ್ತದೆ ಎಂದು ಅಂದಾಜಿಸಲಾಗಿತ್ತು. ಜಾಗತಿಕ ಆರ್ಥಿಕ ಬೆಳವಣಿಗೆಯ ಪ್ರಮುಖ ಭಾಗವಾಗಿ ಭಾರತದ ಆರ್ಥಿಕ ಬೆಳವಣಿಗೆ ಮುಂದುವರೆಯುವುದರಿಂದ ಈ ಜಿಡಿಪಿ ನಿರೀಕ್ಷಿತ ಎಂದು ವರದಿ ತಿಳಿಸಿತ್ತು. ಅವರ ವರದಿಗೆ ವ್ಯತಿರಿಕ್ತವಾಗಿ, 2019-20ನೇ ಸಾಲಿನಲ್ಲಿ ಶೇ.5ಕ್ಕಿಂತ ಕಡಿಮೆ ಜಿಡಿಪಿ ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಜಾಗತಿಕ ಅಂಶಗಳ ಹೊರತಾಗಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಬಂಧಿತ ವಿಷಯಗಳು, ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ ಸುಮಾರು 10 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು, ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿನ ಆರ್ಥಿಕ ಬಿಕ್ಕಟ್ಟು (ಎನ್‌ಬಿಎಫ್‌ಸಿ), ಸ್ಥಿರ ಕೃಷಿ ಮತ್ತು ಗ್ರಾಮೀಣ ಆದಾಯ ಕುಸಿತ ಸೇರಿದಂತೆ ಕೆಲವು ಆಂತರಿಕ ಅಂಶಗಳು ಕಳೆದ ಒಂದು ವರ್ಷದಲ್ಲಿನ ದೇಶದ ಮಂದಗತಿಯ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಭಾರತೀಯ ಆರ್ಥಿಕತೆಯು ತೀವ್ರ ನಿಗಾ ಘಟಕದಲ್ಲಿದೆ (ಐಸಿಯು). ಆದಾಗ್ಯೂ ಆರ್ಥಿಕತೆಯ ಬಗ್ಗೆ ದೇಶದ ಯಾರೊಬ್ಬರು ಭಯಪಡಬೇಕಾಗಿಲ್ಲ. ಏಕೆಂದರೆ ಅದು ನಿಧಾನಗತಿಯೇ ಹೊರತು, ಆರ್ಥಿಕ ಹಿಂಜರಿತವಲ್ಲ. ಒಂದು ವರ್ಷ ಅಥವಾ ನಂತರ ಅವಧಿಯಲ್ಲಿ ನಾವು ಈ ಕುಂಠಿತ ಬೆಳವಣಿಗೆಯಿಂದ ಮರು ಚೇತರಿಕೆ ಹೊಂದಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಹೇಳುತ್ತಿದ್ದಾರೆ.
ಮೊದಲಿಗೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ವಲಯದಲ್ಲಿರುವ ಸವಾಲಿನತ್ತ ಒಮ್ಮೆ ದೃಷ್ಟಿ ಹಾಯಿಸೋಣ. 2017-18ರ ಎನ್‌ಎಸ್‌ಎಸ್‌ಒ ವರದಿಯ ಬಿಡುಗಡೆಯೊಂದಿಗೆ ದೇಶದಲ್ಲಿನ ಉದ್ಯೋಗದ ಸ್ಥಿತಿಗತಿಯ ಕುರಿತು ಗಮನಾರ್ಹವಾದ ಸಂಶೋಧನೆಗಳು ನಡೆದಿವೆ. ದೇಶದ ನಿರುದ್ಯೋಗವು 2017-18ರಲ್ಲಿ 6.1%ಕ್ಕೆ ತಲುಪಿದ್ದು, ಇದು 45 ವರ್ಷಗಳ ಗರಿಷ್ಠ ಕುಸಿತ ಎನ್ನಲಾಗಿದೆ. ಅದೇ ಸಮಯದಲ್ಲಿ, ಜನರು ಕೆಲಸದಲ್ಲಿ ಭಾಗವಹಿಸುವಿಕೆಯ ದರಗಳು ವಿಶೇಷವಾಗಿ ಮಹಿಳೆಯರು ಕೆಲಸದಲ್ಲಿ ಪಾಲ್ಗೊಳ್ಳುವ ದರ ಕಡಿಮೆಯಾಗಿದೆ. ಇದು 2004-05ರಲ್ಲಿ 42% ರಿಂದ 2017-18ರಲ್ಲಿ 22% ಕ್ಕೆ ಇಳಿದಿದೆ. ಇನ್ನು, ಶೇ.85 ರಿಂದ 90ರಷ್ಟು ಕಾರ್ಮಿಕರು ಅನೌಪಚಾರಿಕ ವಲಯದಲ್ಲಿದ್ದಾರೆ. ಅಂದರೆ ಮಾಡುವ ಕೆಲಸಕ್ಕೆ ಅಗತ್ಯ ತರಬೇತಿಯನ್ನೇ ಹೊಂದಿಲ್ಲ. ಆದ್ದರಿಂದ, ಸರ್ಕಾರವು ಔಪಚಾರಿಕ ವಲಯವನ್ನು ವಿಸ್ತರಿಸುವತ್ತ ಗಮನಹರಿಸಬೇಕು ಮತ್ತು ಏಕಕಾಲದಲ್ಲಿ ಅನೌಪಚಾರಿಕ ವಲಯದ ಉತ್ಪಾದಕತೆಯನ್ನು ಹೆಚ್ಚಿಸಬೇಕು.
ದೇಶದಲ್ಲಿ ಜನಸಂಖ್ಯೆಯನ್ನು ಪರಿಗಣಿಸಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಸೇರುತ್ತಿದ್ದಾರೆ ಎಂಬುದು ತಿಳಿದಿದೆ. ಉಳಿದ ಭಾಗವು ವಯಸ್ಸಾಗುತ್ತಿರುವ, ನಿವೃತ್ತರ, ನಿರುದ್ಯೋಗಿಗಳ ಪಡೆಯಾಗಿದೆ. ಯಾವುದೇ ದೇಶದಲ್ಲಿ ಜನರಿಗೆ ಸೂಕ್ತ ಉದ್ಯೋಗ, ಶಿಕ್ಷಣ ಮತ್ತು ಕೌಶಲ್ಯಗಳನ್ನು ಒದಗಿಸಿದರೆ ಮಾತ್ರ ಜನಸಂಖ್ಯಾ ಲಾಭಾಂಶವನ್ನು ಸಾಧಿಸಲಾಗುತ್ತದೆ. ಆದಾಗ್ಯೂ, ರಾಜ್ಯದಿಂದ ರಾಜ್ಯಕ್ಕೆ ಲಾಭಾಂಶ ಭಿನ್ನವಾಗಿದೆ – ವಯಸ್ಸಾದವರ ಪ್ರಮಾಣ ದಕ್ಷಿಣಕ್ಕೆ ಹೋಲಿಸಿದರೆ, ಇದು ಉತ್ತರಕ್ಕೆ ಹೆಚ್ಚಾಗಿದೆ. ಕಾರ್ಮಿಕರ ಕೌಶಲ್ಯ ಕೊರತೆ ಎಲ್ಲರಿಗೂ ತಿಳಿದಿದೆ. ಇತರ ದೇಶಗಳಲ್ಲಿ 70% ರಿಂದ 80% ರಷ್ಟು ಕಾರ್ಮಿಕರು ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಆದರೆ ಭಾರತೀಯ ಕಾರ್ಮಿಕರಲ್ಲಿ ಕೇವಲ 2.3% ಮಾತ್ರ ಔಪಚಾರಿಕ ಕೌಶಲ್ಯ ತರಬೇತಿಯನ್ನು ಹೊಂದಿದ್ದಾರೆ ಎಂದು ನೀತಿ ಆಯೋಗದ ಸಂಶೋಧನಾ ವರದಿ ಹೇಳುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತದಲ್ಲಿ ಕೌಶಲ್ಯಾಭಿವೃದ್ಧಿ ಪ್ರಗತಿ ನಿಧಾನವಾಗಿದೆ. ಕಾರ್ಮಿಕ ಕ್ಷೇತ್ರದಲ್ಲಿ ಕೌಶಲ್ಯ ಭರಿತ ಕಾರ್ಮಿಕರ ಕೊರತೆಯೂ ನಿರುದ್ಯೋಗ ಸಮಸ್ಯೆಗೆ ಬಲವಾದ ಕಾರಣವಾಗಿದೆ.
ಭಾರತದ ಕೌಶಲ್ಯ ಅಭಿವೃದ್ಧಿಯ ಪ್ರದೇಶವಾರು ಚಿತ್ರಣವು ಕೆಲವು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಸಾಂಸ್ಥಿಕ ಚೌಕಟ್ಟನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾಕಲಾಗಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಹೆಚ್ಚಿನ ಭಾಗವಹಿಸುವಿಕೆಗಾಗಿ ಖಾಸಗಿ ಕೈಗಾರಿಕೆಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯ ಸರ್ಕಾರದ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಗಳನ್ನು ರಚಿಸಲಾಗುತ್ತಿದೆ ಮತ್ತು 17 ಕೇಂದ್ರ ಸಚಿವಾಲಯಗಳು ಕೌಶಲ್ಯಕ್ಕೆ ಉಪಕ್ರಮಗಳನ್ನು ಕೈಗೊಂಡಿವೆ. ಜನರ ಕೌಶಲ್ಯ ಸುಧಾರಣೆಗೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಸಂಬಂಧಪಟ್ಟ ಎಲ್ಲ ಪಾಲುದಾರರಿಂದ ಸಮಾನ ಭಾಗವಹಿಸುವಿಕೆಯೂ ಮುಖ್ಯವಾಗುತ್ತದೆ. ತಳಮಟ್ಟದಲ್ಲಿ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸುವ ಅವಶ್ಯಕತೆಯಿದೆ.
ಕೌಶಲ್ಯಾಭಿವೃದ್ಧಿಯಲ್ಲಿ ಚೀನಾದ ಅನುಭವವು ಭಾರತಕ್ಕೆ ಕೆಲವು ಪಾಠಗಳನ್ನು ಕಲಿಸಬಹುದು. ಚೀನಾದಲ್ಲಿ 1996ರಲ್ಲಿ ವೃತ್ತಿಪರ ಶಿಕ್ಷಣ ಕಾನೂನು ಜಾರಿಗೆ ತರಲಾಯಿತು. ಇದು ಚೀನಾದ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ) ವ್ಯವಸ್ಥೆಗೆ ಒಂದು ಹೆಗ್ಗುರುತಾಗಿದೆ. ಚೀನಾದ ಆರ್ಥಿಕತೆಗೆ ವಿಭಿನ್ನವಾದ ಹಲವು ವೈಶಿಷ್ಟ್ಯಗಳಿವೆ. ಅದರಲ್ಲಿ ಈ ಕ್ರಮ ಸ್ಥಳೀಯ ಮಟ್ಟದಲ್ಲಿ ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಕಾರ್ಯಗತಗೊಳಿಸಲು ಕುಶಲತೆ ಮತ್ತು ಹೊಸತನವನ್ನು ಒದಗಿಸಿತು. ಸ್ಥಳೀಯ ಉದ್ಯಮಗಳ ಭಾಗವಹಿಸುವಿಕೆಯೊಂದಿಗೆ ಕೈಗಾರಿಕಾ ಪ್ರಕ್ರಿಯೆಯೊಂದಿಗೆ ಶಿಕ್ಷಣ ಮತ್ತು ತರಬೇತಿಯನ್ನು ಸಂಯೋಜಿಸುವ ನಿಯಮವನ್ನು ಈ ಕಾನೂನು ಹೊಂದಿದೆ. ಇದಲ್ಲದೆ, ಇದು ವಯಸ್ಕರಿಗೆ ತರಬೇತಿ ನೀಡುವುದರ ಜೊತೆಗೆ ವೃತ್ತಿಪರ ಶಿಕ್ಷಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿಯನ್ನು ನೀಡುತ್ತದೆ. ಅನೇಕ ಇತರ ದೇಶಗಳು ತಮ್ಮ ದೇಶಗಳಲ್ಲಿ ವೃತ್ತಿಪರ ಶಿಕ್ಷಣ ಮತ್ತು ತರಬೇತಿಗೆ ಕಾನೂನು ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಇಂತಹ ಕಾರ್ಯವನ್ನು ಹೊಂದಿವೆ (ಉದಾಹರಣೆಗೆ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಜರ್ಮನಿ). ಇದೇ ರೀತಿಯ ಕಾರ್ಯವು ಭಾರತದಲ್ಲಿ ಆಗಬೇಕಿದೆ. ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಯ ಈ ರೀತಿಯ ಎಲ್ಲಾ ಕಾನೂನುಗಳ ಮೇಲೆ ಕೇಂದ್ರೀಕರಿಸಬೇಕು. ಪಠ್ಯದ ಭಾಗವಾಗಬೇಕು. ಒಂದು ಕಡೆ ಕೇಂದ್ರ ಮತ್ತು ರಾಜ್ಯದ ನಿರ್ದಿಷ್ಟ ಜವಾಬ್ದಾರಿಗಳನ್ನು ತಿಳಿಸುವುದರ ಜೊತೆಗೆ ಕೌಶಲ್ಯವನ್ನು ಒದಗಿಸುವ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒದಗಿಸಬೇಕು.
ಕೌಶಲ್ಯ ಅಭಿವೃದ್ಧಿಯ ಮತ್ತೊಂದು ವಿಷಯವೆಂದರೆ ದಕ್ಷಿಣ ಕೊರಿಯಾದಂತಹ ದೇಶಗಳು ಉತ್ತಮ ಗುಣಮಟ್ಟದ ಸಾಮಾನ್ಯ ಶಿಕ್ಷಣದ ಜೊತೆಗೆ ಕೌಶಲ್ಯಗಳನ್ನು ಹೆಚ್ಚಿಸಿವೆ. ಆದ್ದರಿಂದ, ಕೌಶಲ್ಯ ಅಭಿವೃದ್ಧಿಯನ್ನು ಉಳಿಸಿಕೊಳ್ಳಲು ಭಾರತೀಯ ಜನತೆಗೆ ಗುಣಮಟ್ಟದ ಸಾಮಾನ್ಯ ಶಿಕ್ಷಣವನ್ನು ಒದಗಿಸಬೇಕಾಗಿದೆ.
ದೇಶದ ಆರ್ಥಿಕ ಪ್ರಗತಿಯಲ್ಲಿ ಗಮನಿಸಬೇಕಾದ ಎರಡನೇ ಸವಾಲು ಗ್ರಾಮೀಣ ಭಾರತದ ಸಾಮಾಜಿಕ ಆರ್ಥಿಕ ಸೇರ್ಪಡೆ. ಕಳೆದ ಒಂದು ವರ್ಷದಲ್ಲಿ ಗ್ರಾಮೀಣ ಆದಾಯ ಮತ್ತು ವೇತನದಲ್ಲಿ ಕುಸಿತ ಕಂಡಿದೆ. ವಿಶೇಷವಾಗಿ ಮೂಲಸೌಕರ್ಯ, ಅಂತರ್ಜಾಲ ಸೇರಿದಂತೆ ಡಿಜಿಟಲೀಕರಣ ಮತ್ತು ಆರ್ಥಿಕ ಸೇರ್ಪಡೆಯ ವಿಷಯದಲ್ಲಿ ಗ್ರಾಮೀಣ / ಅರೆ ನಗರ ಮತ್ತು ನಗರ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ. ಮೂಲಸೌಕರ್ಯಕ್ಕಾಗಿ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ. ಘೋಷಣೆ ಈ ನಿಟ್ಟಿನಲ್ಲಿ ಒಂದು ಪ್ರಮುಖ ಕ್ರಮವಾಗಿದೆ. ಆದಾಗ್ಯೂ, ಇದರ ಸದ್ಬಳಕೆಗೆ ಸರಿಯಾದ ವಿವರಗಳನ್ನು ರೂಪಿಸಬೇಕಾಗಿದೆ. 100 ಲಕ್ಷ ಕೋಟಿ ರೂ. ಖರ್ಚು ಮಾಡಲು ಪ್ರಾರಂಭಿಸಿದಾಗ ಸರ್ಕಾರ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳತ್ತ ಹೆಚ್ಚು ಗಮನ ಹರಿಸಬೇಕು.