ನವದೆಹಲಿ:ದೇಶದಲ್ಲಿ ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಆದಾಯ ತೆರಿಗೆ ಇಲಾಖೆಯು ತೆರಿಗೆ ಅಧಿಕಾರಿಗಳ ಮತ್ತು ತೆರಿಗೆ ಪಾವತಿದಾರರ ಹಕ್ಕು ಮತ್ತು ಜವಾಬ್ದಾರಿಗಳನ್ನು ತಿಳಿಸುವ ‘ತೆರಿಗೆದಾರರ ಚಾರ್ಟರ್’ ಎಂಬ ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲಿದೆ.
ಫೇಸ್‌ಲೆಸ್ ಮೌಲ್ಯಮಾಪನ ಸೇವೆಯು ತೆರಿಗೆದಾರರ ಚಾರ್ಟರ್ನಲ್ಲಿ ಇಂದಿನಿಂದ ಜಾರಿಗೆ ಬರುತ್ತಿದ್ದು, ಫೇಸ್‌ಲೆಸ್ ಮನವಿ ಸೇವೆ ಸೆಪ್ಟೆಂಬರ್ 25ರಿಂದ ಲಭ್ಯವಿರಲಿದೆ. ಭಾರತದಾದ್ಯಂತ ಫೇಸ್‌ಲೆಸ್ ನಿರ್ವಹಣಾ ತಂಡಗಳು ಐಟಿ ಆದಾಯವನ್ನು ಪರಿಶೀಲಿಸಲಿವೆ ಮತ್ತು ಕುಂದುಕೊರತೆಗಳನ್ನು ಪರಿಹರಿಸುತ್ತವೆ.
ಏನಿದು ಫೇಸ್‌ಲೆಸ್ ಕೋರಿಕೆ?
ಫೇಸ್‌ಲೆಸ್ ಕೋರಿಕೆ ವ್ಯವಸ್ಥೆಯಡಿ ದೇಶದ ಯಾವುದೇ ಅಧಿಕಾರಿಗೆ ತೆರಿಗೆದಾರರು ತಮ್ಮ ಮನವಿಯನ್ನು ಕಟ್ಟಲೆಯಿಲ್ಲದೆ ಕಳುಹಿಸಬಹುದು. ಮೇಲ್ಮನವಿ ನಿರ್ಧರಿಸುವ ಅಧಿಕಾರಿ ಯಾರೆಂಬುದರ ಬಗ್ಗೆ ಗುರುತು ಸಹ ತಿಳಿಯುವುದಿಲ್ಲ.
ಈ ಮನವಿಯು ಯಾವುದೇ ನಗರದಿಂದ ಬರಬಹುದು. ಇಲ್ಲಿಯವರೆಗೆ ನಗರದಲ್ಲಿನ ಎಲ್ಲಾ ತೆರಿಗೆ ಸಂಬಂಧಿತ ಪರಿಶೀಲನೆಯನ್ನು ಆ ನಗರದ ಆದಾಯ ತೆರಿಗೆ ಇಲಾಖೆ ಮಾತ್ರ ನಿರ್ವಹಿಸುತ್ತಿತ್ತು. ಈಗ ತಂತ್ರಜ್ಞಾನದ ಸಹಾಯದಿಂದ ದೇಶದಲ್ಲಿ ಎಲ್ಲಿಯಾದರೂ ಸಾಮುದಾಯಿಕವಾಗಿ ಆಯ್ಕೆಯಾದ ಐಟಿ ಅಧಿಕಾರಿಯಿಂದ ಪರಿಶೀಲನೆ ನಡೆಯಲಿದೆ.
ಫೇಸ್‌ಲೆಸ್ ಮೌಲ್ಯಮಾಪನ:
ತೆರಿಗೆ ಪಾವತಿದಾರ ಮತ್ತು ಆದಾಯ ತೆರಿಗೆ ಇಲಾಖೆಯ ನಡುವಿನ ಅಂತರವನ್ನು ತೆಗೆದುಹಾಕುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತದೆ.
ನೂತನ ವ್ಯವಸ್ಥೆಯನ್ನು ತೆರಿಗೆದಾರರ ಆಯ್ಕೆ ವಿಶ್ಲೇಷಣೆ ಮತ್ತು ಎಐ ಬಳಕೆಯ ಮೂಲಕ ಕಾರ್ಯಗತಗೊಳಿಸಲಾಗುತ್ತದೆ. ಈ ವ್ಯವಸ್ಥೆಯು ಪ್ರಾದೇಶಿಕ ನ್ಯಾಯವ್ಯಾಪ್ತಿಯನ್ನು ರದ್ದುಗೊಳಿಸುತ್ತದೆ. ಓರ್ವ ತೆರಿಗೆದಾರ ಒಂದು ನಿರ್ದಿಷ್ಟ ನಗರಕ್ಕೆ ಸೇರಿರಬಹುದು. ಆದರೆ ಮೌಲ್ಯಮಾಪನ ಪರಿಶೀಲನೆ ಮತ್ತು ಅಂತಿಮ ನಿರ್ಣಯ ವಿವಿಧ ನಗರಗಳಲ್ಲಿ ನಡೆಯುತ್ತದೆ. ಪ್ರಕರಣಗಳನ್ನು ಕಟ್ಟಲೆಯಿಲ್ಲದಂತಹ ಆಧಾರದ ಮೇಲೆ ಸ್ವಯಂಚಾಲಿತವಾಗಿ ಹಂಚಿಕೆ ಮಾಡಲಾಗುತ್ತದೆ. ತೆರಿಗೆದಾರರು ಆದಾಯ ತೆರಿಗೆ ಕಚೇರಿಗೆ ಅಥವಾ ಅಧಿಕಾರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಮೇಲ್ಮನವಿ ನಿರ್ಧಾರವನ್ನು ತಂಡ ಆಧಾರಿತವಾಗಿ ಪರಿಶೀಲಿಸಲಾಗುತ್ತದೆ.
ಆದಾಯ ತೆರಿಗೆ ಇಲಾಖೆಯು ಹೊಣೆಗಾರಿಕೆಯನ್ನು ಒದಗಿಸುವುದಕ್ಕಾಗಿ ಡಾಕ್ಯುಮೆಂಟ್ ಐಡೆಂಟಿಫಿಕೇಶನ್ ನಂಬರ್ ಅನ್ನು (ಡಿಐಎನ್) ಪರಿಚಯಿಸುತ್ತಿದೆ. ಇದು ಎಲ್ಲ ರೀತಿಯ ಸಂವಹನಕ್ಕೆ ನೆರವಾಗಲಿದೆ. ಡಿಐಎನ್ ಇಲ್ಲದೆ, ಐಟಿ ಇಲಾಖೆಯಿಂದ ನೀಡುವ ದಾಖಲೆಗಳು ಅಮಾನ್ಯವಾಗುತ್ತವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
2012-13ರಲ್ಲಿ ಎಲ್ಲಾ ತೆರಿಗೆ ರಿಟರ್ನ್‌ಗಳ ಶೇ 0.94ರಷ್ಟು ಪರಿಶೀಲನೆ ನಡೆಸಲಾಯಿತು. 2018-19ರಲ್ಲಿ ಈ ಅಂಕಿ ಅಂಶವು 0.26ರಷ್ಟಕ್ಕೆ ಇಳಿದಿದೆ. ಪರಿಶೀಲನೆಯು ಸುಮಾರು ನಾಲ್ಕು ಪಟ್ಟು ಕಡಿಮೆಯಾಗಿದೆ. ಹೀಗಾಗಿ, ಪರಿಶೀಲನೆ ಪ್ರಮಾಣ ಹೆಚ್ಚಿಸಲು ಹಾಗೂ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸಿ ತೆರಿಗೆದಾರರಿಗೆ ಸುಧಾರಣೆಗಳನ್ನು ಅರ್ಥಮಾಡಿಕೊಡಲು ಈ ವ್ಯವಸ್ಥೆ ತರಲಾಗುತ್ತಿದೆ.
ಪ್ರಾಮಾಣಿಕ ತೆರಿಗೆದಾರನಿಗೆ ಇನ್ನಿಲ್ಲ ಕಿರುಕುಳ:
ತೆರಿಗೆ ಪಾವತಿದಾರರಿಗೆ ಕಿರುಕುಳ ನೀಡುತ್ತಿದ್ದ ಯುಗ ಇಂದಿಗೆ ಮುಗಿಯಿತು. ತೆರಿಗೆ ಮೌಲ್ಯಮಾಪನಕ್ಕೆ ತಡೆರಹಿತ ಪಾರದರ್ಶಕ ವ್ಯವಸ್ಥೆ ಪ್ರಾರಂಭಿಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಅಧಿಕಾರಿಗಳು ಕಂಪ್ಯೂಟರ್ ಪ್ರೋಗ್ರಾಂ ಮೂಲಕ ಈ ವ್ಯವಸ್ಥೆಯನ್ನು ಮುಕ್ತವಾಗಿ ಆಯ್ದುಕೊಳ್ಳಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬಂದಿದೆ. ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಸೆಪ್ಟೆಂಬರ್ 25ರಿಂದ ಫೇಸ್‌ಲೆಸ್ ಕೋರಿಕೆ ಜಾರಿಗೆ ತರಲಾಗುವುದು. ತೆರಿಗೆ ವ್ಯವಸ್ಥೆಯು ನ್ಯಾಯೋಚಿತ ಮತ್ತು ನಿರ್ಭಯತೆಯ ತೆರಿಗೆದಾರರ ವಿಶ್ವಾಸ ವೃದ್ಧಿಸಲಿದೆ. ಈ ಹೊಸ ವ್ಯವಸ್ಥೆಯಡಿ ಯಾವುದೇ ಕಿರುಕುಳ ಇರುವುದಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.