ನವದೆಹಲಿ: ತೆರಿಗೆದಾರರಿಂದ ಮಾಹಿತಿ ಹತೋಟಿ ತಡೆಯುವ ಪ್ರಯತ್ನವಾಗಿ ಆದಾಯ ತೆರಿಗೆ ಇಲಾಖೆಯು ತನ್ನ ಹಣಕಾಸು ವಹಿವಾಟುಗಳಾದ ಸ್ಟಾಕ್ ಮಾರಾಟ ಮತ್ತು ಖರೀದಿ, ರಿಯಲ್ ಎಸ್ಟೇಟ್ ವಹಿವಾಟುಗಳು, ಕ್ರೆಡಿಟ್ ಕಾರ್ಡ್ ಬಿಲ್‌ಗಳ ಪಾವತಿ ವಿವರಗಳನ್ನು ನೂತನ ಫಾರ್ಮ್ 26ಎಎಸ್ನಲ್ಲಿ ದಾಖಲಿಸಲಿದೆ.
ತೆರಿಗೆದಾರರ ತೆರಿಗೆ ಪಾಸ್ಬುಕ್ ಅಥವಾ 26ಎಎಸ್ ರೂಪವು ತೆರಿಗೆದಾರರ ವಿವರ ಮತ್ತು ಇತರ ಹಣಕಾಸು ವಹಿವಾಟುಗಳ ವಿವರಗಳನ್ನು ಒಳಗೊಂಡಿದೆ. ಈ ವರ್ಷದಿಂದ ತೆರಿಗೆದಾರರ ನಿರ್ದಿಷ್ಟ ಹಣಕಾಸಿನ ವಹಿವಾಟು ಸೇರಿಸಲು ಅದರ ಸ್ವರೂಪದಲ್ಲಿ ಬದಲಾಯಿಸಲಾಗಿದೆ. ಅದನ್ನು ಹಣಕಾಸು ವ್ಯವಹಾರಗಳ ಹೇಳಿಕೆಯ (ಎಸ್‌ಎಫ್‌ಟಿ) ರೂಪದಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
ಇದರಲ್ಲಿ ಷೇರುಗಳ ಖರೀದಿ ಮತ್ತು ಮಾರಾಟ, ರಿಯಲ್ ಎಸ್ಟೇಟ್ ಇತ್ಯಾದಿ, ಬ್ಯಾಂಕ್ ಡ್ರಾಫ್ಟ್‌ಗಳ ಖರೀದಿಗೆ ನಗದು ಪಾವತಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಮೊಬೈಲ್ ವ್ಯಾಲೆಟ್‌ಗಳ) ಪೂರ್ವ ಪಾವತಿ, ಹಣಕಾಸು ವರ್ಷದಲ್ಲಿನ ನಗದು ಠೇವಣಿ, ಕ್ರೆಡಿಟ್ ಕಾರ್ಡ್ ಪಾವತಿ ಬಿಲ್ ಸೇರಿವೆ. ತೆರಿಗೆದಾರರ ಇತರ ವಿವರಗಳಾದ ಆಧಾರ್ ಸಂಖ್ಯೆ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ವಿಳಾಸ ಕೂಡ ಹೊಸ ರೂಪದಲ್ಲಿ ಇರುತ್ತದೆ.
ಹೊಸ ಫಾರ್ಮ್ 26ಎಎಸ್ ತೆರಿಗೆದಾರರ ಆದಾಯ ತೆರಿಗೆ ಲೆಕ್ಕವನ್ನು ತ್ವರಿತವಾಗಿ ಮತ್ತು ಸರಿಯಾಗಿ ಇ-ಫೈಲ್ ಮಾಡಲು ನೆರವಾಗಲಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ನಿರ್ದಿಷ್ಟ ಎಸ್‌ಎಫ್‌ಟಿ ಸಲ್ಲಿಕೆದಾರರಿಂದ ಆದಾಯ ತೆರಿಗೆ ಇಲಾಖೆಯಿಂದ ಪಡೆಯಲಾಗುತ್ತಿರುವ ಮಾಹಿತಿಯನ್ನು ಈಗ ಸ್ವಯಂಪ್ರೇರಿತ ಅನುಸರಣೆ, ತೆರಿಗೆ ಹೊಣೆಗಾರಿಕೆ ಮತ್ತು ರಿಟರ್ನ್ಸ್ ಇ-ಫೈಲಿಂಗ್ ಸುಲಭಗೊಳಿಸಲು ಫಾರ್ಮ್ 26ಎಎಸ್‌ನ ಪಾರ್ಟ್ 'ಇ'ನಲ್ಲಿ ತೋರಿಸಲಾಗಿದೆ. ಸರಿಯಾದ ತೆರಿಗೆ ಹೊಣೆಗಾರಿಕೆ ಲೆಕ್ಕಹಾಕುವ ಮೂಲಕ ತೆರಿಗೆದಾರರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಲು ಬಳಸಬಹುದು. ಇದು ತೆರಿಗೆ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಮತ್ತು ಹೊಣೆಗಾರಿಕೆ ತರುತ್ತದೆ ಎಂದು ಹೇಳಿದೆ.
ಏನಿದು ಫಾರ್ಮ್ 26ಎಎಸ್?
ಪ್ಯಾನ್ ಕಾರ್ಡ್ ಮುಖೇನ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ಪ್ರತಿಯೊಬ್ಬರು ಪಾವತಿಸಿದ್ದ ಆದಾಯ ಕರದ ಪಟ್ಟಿಯನ್ನು ಫಾರ್ಮ್ 26ಎಎಸ್ ವೈಯಕ್ತಿಕ ಪಟ್ಟಿಯಲ್ಲಿ ನೋಂದಣಿ ಆಗಿರುತ್ತದೆ. ಸಂಬಳ, ಬ್ಯಾಂಕ್ ಬಡ್ಡಿ, ಕಮಿಷನ್ ಪಾವತಿಯಿಂದ ಕಡಿತವಾದ ಟಿಡಿಎಸ್, ಸ್ವಂತದ ಅಡ್ವಾನ್ಸ್ ತೆರಿಗೆ, ಸೆಲ್ ಅಸೆಸ್‌ಮೆಂಟ್ ಟ್ಯಾಕ್ಸ್ ವಿವರಗಳು ಈ ಫಾರ್ಮ್ 23 ಎಎಸ್ನಲ್ಲಿ ದಾಖಲಾಗುತ್ತವೆ.
ಆದಾಯ ತೆರಿಗೆ ಇಲಾಖೆ ತೆರಿಗೆದಾರರು ತುಂಬುವ ಟ್ಯಾಕ್ಸ್ ರಿಟರ್ನ್ಸ್ ಅನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ಫಾರ್ಮ್ 26ಎಎಸ್ ಪ್ರಕಾರ ಟಿಸಿಎಸ್ ಮೂಲಕ ದಾಖಲಾದ ಎಲ್ಲ ಆದಾಯಗಳು ನಿಮ್ಮ ರಿಟರ್ನ್ಸ್ ಫೈಲಿಂಗ್ನಲ್ಲಿ ಸೇರಿರಬೇಕು. ಟಿಡಿಎಸ್ ಅಲ್ಲದೆ ಬಾಕಿ ಉಳಿದ ತೆರಿಗೆಯನ್ನು ಸ್ಲಾಬ್‌ಗೆ ಅನ್ವಯವಾಗುವಂತೆ ಪಾವತಿಸಿರಬೇಕು. ಈ ರೀತಿ ತಾಳೆಯಾಗದ ಎಲ್ಲ ವ್ಯವಹಾರಗಳನ್ನು ಆದಾಯ ತೆರಿಗೆ ಇಲಾಖೆ ಕಂಪ್ಯೂಟರ್ನಿಂದ ಪತ್ತೆಹಚ್ಚಿ ವೈಯಕ್ತಿಕ ನೋಟಿಸ್ಗಳನ್ನು ಕಳುಹಿಸುತ್ತದೆ.