ನವದೆಹಲಿ: ದಿವಾಳಿ ಸಂಹಿತೆ ಕಾಯ್ದೆ (ಐಬಿಸಿ) ಪ್ರಕ್ರಿಯೆ ಮೂಲಕ ಸುಸ್ತಿದಾರ ಕಂಪನಿಗಳಿಂದ ದೊಡ್ಡ ಮೊತ್ತದ ಸಾಲ ವಸೂಲಿ ಮಾಡುವ ಆರ್‌ಬಿಐನ ಕಠಿಣ ಕ್ರಮದ ಸುತ್ತೋಲೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
2018ರ ಫೆಬ್ರವರಿ 12ರ ಸುತ್ತೋಲೆ ಅನ್ವಯ, ಬೃಹತ್ ಕಂಪನಿ ಹಾಗೂ ಸಂಸ್ಥೆಗಳು ಸಾಲ ಮರುಪಾವತಿಗೆ ಒಂದೇ ಒಂದು ದಿನ ವಿಳಂಬ ಮಾಡಿದರೇ ಅಂತಹ ಸಾಲದ ಖಾತೆಗಳನ್ನು ಸುಸ್ತಿ ಸಾಲವೆಂದು ವಿಭಜಿಸುತ್ತಿದ್ದವು. ಇದರಡಿ ಆರ್ಬಿಐ - ಸಾಲ ವಸೂಲಾತಿಗೆ ದಿವಾಳಿ ಸಂಹಿತೆಯಡಿ ಕ್ರಮ ಕೈಗೊಳ್ಳಲು ಫೆ.12ರ ಸುತ್ತೋಲೆ ಅವಕಾಶ ಕಲ್ಪಿಸಿತ್ತು. ಇದಕ್ಕೆ ಬಹುತೇಕ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
₹ 2,000 ಕೋಟಿಗಿಂತ ಹೆಚ್ಚಿನ ಸುಸ್ತಿಸಾಲದ ಪ್ರಕರಣಗಳಲ್ಲಿ 180 ದಿನಗಳಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ, ಅಂತಹ ಸಾಲದ ಖಾತೆಗಳನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಅಥವಾ ದಿವಾಳಿ ಕೋರ್ಟ್‌ಗೆ ಕಡ್ಡಾಯವಾಗಿ ಶಿಫಾರಸು ಮಾಡಬೇಕಾಗಿತ್ತು. ಸಾಲ ವಸೂಲಿಯ ಕಠಿಣ ಕಾನೂನು ಕ್ರಮವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದರಿಂದ ಬ್ಯಾಂಕ್‌ಗಳು ಮತ್ತು ಸಾಲಗಾರರ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್‌ಗಳ ಪಾಲಿಗೆ ಇದರಿಂದ ಭಾರಿ ಹಿನ್ನಡೆ ಉಂಟಾಗಲಿದೆ. ಆದರೆ, ಸಾಲದ ಸುಳಿಗೆ ಸಿಲುಕಿರುವ ವಿದ್ಯುತ್, ಉಕ್ಕು, ಜವಳಿ, ಸಕ್ಕರೆ ವಲಯಗಳ ಕಂಪನಿಗಳಿಗೆ ಪರಿಹಾರ ಸಿಗಲಿದೆ. ಸುಸ್ತಿದಾರ ಕಂಪನಿಗಳಿಂದ ಸಾಲ ವಸೂಲಿ ಮಾಡಲು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯ ಮಂಡಳಿಗೆ (ಎನ್‌ಸಿಎಲ್‌ಅ) ಶಿಫಾರಸು ಮಾಡಲು ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶನ ನೀಡಬಹುದಾಗಿದೆ ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.