ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು 'ಆ್ಯಕ್ಟ್ ಆಫ್ ಗಾಡ್' ಎಂದು ಹೇಳಿಕೆ ನೀಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಖಂಡಿಸಿದ್ದಾರೆ.
ಗುರುವಾರ ನಡೆದ 41ನೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಬಳಿಕ ನಿರ್ಮಲಾ ಸೀತಾರಾಮನ್ ಅವರು, 'ಆ್ಯಕ್ಟ್ ಆಫ್ ಗಾಡ್' ಎಂಬ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಗೆ ತೀವ್ರ ತೊಂದರೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದರಿಂದ ಸಂಕೋಚನ ಕಾಣುತ್ತಿದೆ. ಆದಾಯ ಕೊರತೆಯ ಜಿಎಸ್ಟಿ ಬಾಕಿ ಪರಿಹಾರ ಬೇಡಿಕೆ ಇರಿಸಿರುವ ರಾಜ್ಯಗಳ ಮುಂದೆ ಎರಡು ಆಯ್ಕೆಗಳನ್ನು ಇಡಲಾಗಿದೆ ಎಂದು ಹೇಳಿದ್ದರು.
ಕೋವಿಡ್-19 ಸೋಂಕಿಗಿಂತ ಮೊದಲು ಜಿಡಿಪಿ ಏಕೆ ಕಡಿಮೆಯಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ -19 ಅನ್ನು ಆ್ಯಕ್ಟ್ ಆಫ್ ಗಾಡ್ ಎಂದು ಸಭೆಯೊಂದರಲ್ಲಿ ಹೇಳಿದ್ದರು ಎಂದು ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ನಾನು ಶೀಘ್ರದಲ್ಲೇ ವಿಡಿಯೋವನ್ನು ಪೋಸ್ಟ್ ಮಾಡುತ್ತೇನೆ. ಜಿಡಿಪಿಯ ವಾರ್ಷಿಕ ಬೆಳವಣಿಗೆಯ ದರವು ಶೇ 8ರಿಂದ ಇಳಿಕೆಯಾಗಿದೆಯೇ? 2015ರ ಹಣಕಾಸು ವರ್ಷದಿಂದ 2020ರ ಮೊದಲ ತ್ರೈಮಾಸಿಕದ ಶೇ3.1ರಷ್ಟಿರುವ ಕೋವಿಡ್-19 ಪೂರ್ವದ ಬೆಳವಣಿಗೆಗೂ ದೇವರ ಕಾರ್ಯವೇ ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಹಣಕಾಸು ಸಚಿವ ಹಸೀಬ್ ದ್ರಾಬು ಅವರು ಸಹ ಸೀತಾರಾಮನ್ ಅವರ ಅಭಿಪ್ರಾಯವನ್ನು ಖಂಡಿಸಿದ್ದಾರೆ. 'ರಾಜ್ಯಗಳಿಗೆ ಪರಿಹಾರ ಧನ ನಿರಾಕರಿಸಲು “ದೇವರ ಕಾಯ್ದೆ” ವಾದವನ್ನು ಆರಂಭಿಸುವ ಮೂಲಕ ಕೇಂದ್ರ ಹಣಕಾಸು ಸಚಿವಾಲಯವು ವಿಮಾ ಕಂಪನಿಯಂತೆ ವರ್ತನೆ ಮಾಡಬಾರದು. ಪರಿಹಾರ ನಿಧಿಯ ಕೊರತೆಗೆ ಹಣಕಾಸು ಒದಗಿಸಲು ಹಲವು ಮಾರ್ಗಗಳಿವೆ' ಎಂದು ಟ್ವೀಟ್ ಮಾಡಿದ್ದಾರೆ.