ನವದೆಹಲಿ: ಪಾಸ್‌ಪೋರ್ಟ್ ಅನುಮತಿ ನೀಡುವ ಮೊದಲು ಅರ್ಜಿದಾರರ ಸಾಮಾಜಿಕ ಮಾಧ್ಯಮ ನಡವಳಿಕೆ ಪರಿಶೀಲಿಸಲು ಉತ್ತರಾಖಂಡ ಪೊಲೀಸರು ನಿರ್ಧರಿಸಿದ್ದಾರೆ.
ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಪಾತ್ರದ ಕುರಿತು ನಡೆದ ಸಭೆಯಲ್ಲಿ ಪಾಸ್‌ಪೋರ್ಟ್ ಅರ್ಜಿದಾರರ ಸಾಮಾಜಿಕ ಮಾಧ್ಯಮ ನಡವಳಿಕೆಯ ಪರೀಕ್ಷೆಯನ್ನು ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ ಮಾಡಲು ನಿರ್ಧರಿಸಲಾಯಿತು.
ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಹೆಚ್ಚುತ್ತಿರುವ ದುರುಪಯೋಗ ತಡೆಯುವ ಪ್ರಯತ್ನವನ್ನು ಅಧಿಕಾರಿಗಳಿಗೆ ಒತ್ತಿ ಹೇಳಿದರು.
ಪಾಸ್‌ಪೋರ್ಟ್ ಅರ್ಜಿದಾರರ ಆನ್‌ಲೈನ್ ನಡವಳಿಕೆಯನ್ನು ಪರಿಶೀಲನೆ ಮಾಡಬೇಕಾಗಿದೆ. ಪಾಸ್‌ಪೋರ್ಟ್ ಕಾನೂನಿನಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಷರತ್ತು ಜಾರಿಗೊಳಿಸುವ ಪರವಾಗಿ ಮಾತ್ರ ಮಾತನಾಡಿದ್ದೇನೆ. ಹೊಸ ಅಥವಾ ತೀವ್ರವಾದ ಕ್ರಮವನ್ನು ಪರಿಚಯಿಸಿಲ್ಲ ಎಂದು ಡಿಜಿಪಿ ಅವರು ತಮ್ಮ ನಿರ್ಧಾರ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಚಿಲ್ಲರೆ ಹೂಡಿಕೆದಾರರ ಉತ್ತೇಜನಕ್ಕೆ ಸರ್ಕಾರಿ ಸೆಕ್ಯುರೀಟಿಸ್ ಮಾರುಕಟ್ಟೆಗೆ ಮುಕ್ತ ಪ್ರವೇಶ: RBI
ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಯಾರಿಗಾದರೂ ಡಾಕ್ಯುಮೆಂಟ್ ಅನ್ನು ವಿತರಿಸಬಾರದು ಎಂಬ ಪಾಸ್‌ಪೋರ್ಟ್ ಕಾನೂನಿನಲ್ಲಿ ಒಂದು ಷರತ್ತಿದೆ. ನಾನು ಅದನ್ನು ಜಾರಿಗೊಳಿಸುವ ಪರವಾಗಿ ಮಾತ್ರ ಮಾತನಾಡಿದ್ದೇನೆ. ಪೊಲೀಸ್ ಅಧಿಕಾರಿಯಾಗಿ ನಮ್ಮ ಸಂವಿಧಾನದಿಂದ ವ್ಯಾಖ್ಯಾನಿಸಲಾದ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ನಿಲ್ಲುತ್ತೇನೆ ಎಂದಿದ್ದಾರೆ.
ಪಾಸ್‌ಪೋರ್ಟ್ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೇ ಎಂದು ಪೊಲೀಸರು ಮಾತ್ರ ಪರಿಶೀಲಿಸುತ್ತಾರೆ. ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪೆರೇಡ್ ಗದ್ದಲದಲ್ಲಿ ಸಾಮಾಜಿಕ ಮಾಧ್ಯಮದ ಪಾತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, "ಉದ್ವೇಗ ಹೆಚ್ಚಿಸಲು" ಸಾಮಾಜಿಕ ಮಾಧ್ಯಮವನ್ನು ಬಳಸಲಾಗುತ್ತದೆ ಎಂದರು.
ಸಾಮಾಜಿಕ ಮಾಧ್ಯಮಗಳ ಹೆಚ್ಚುತ್ತಿರುವ ದುರುಪಯೋಗವನ್ನು ನಿರುತ್ಸಾಹಗೊಳಿಸಲು ಮತ್ತು ಹೆಚ್ಚು ಜವಾಬ್ದಾರಿಯುತವಾಗಿರಲು ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ಈ ರೀತಿಯ ನಿಯಂತ್ರಣ ಅವಶ್ಯಕವಿದೆ ಎಂದು ಹೇಳಿದರು.