ನವದೆಹಲಿ :ಮೂರು ವಾರಗಳ ಅಂತರದ ನಂತರ ಕೇಂದ್ರ ಸಚಿವರು ಮತ್ತು ಅವರ ಸಿಬ್ಬಂದಿ ಸೋಮವಾರ ಕಚೇರಿಗಳಿಗೆ ಹಾಜರಾಗುತ್ತಿದ್ದಂತೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ತಮ್ಮ ನಾರ್ಥ್ ಬ್ಲಾಕ್ ಕಚೇರಿಗೆ ಮನೆಯಲ್ಲಿ ತಯಾರಿಸಿದ ಮುಖಗವಸು ಧರಿಸಿ ಬಂದಿದ್ದರು.
ಕೊರೊನಾ ವೈರಸ್ ಹೆದರಿಕೆಯಿಂದಾಗಿ ಮಾರ್ಚ್ 24ರ ಮಧ್ಯರಾತ್ರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದಾಗಿನಿಂದ ಸಚಿವರು ಮನೆಯಿಂದ ಕೆಲಸ ಮಾಡುತ್ತಿದ್ದರು. ಕಚೇರಿಯಿಂದ ಕೆಲಸ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡ ಸೀತಾರಾಮನ್, 'ಇಂದು ಬೆಳಗ್ಗೆ ಮನೆಯಲ್ಲಿ ತಯಾರಿಸಿದ ಮುಖಗವಸು ಧರಿಸಿ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಕೆಲಸ ಮಾಡಲು ಹಿಂತಿರುಗಿದ್ದೇನೆ ಎಂದು ಬರೆದುಕೊಂಡರು.
ಸಾಂಕ್ರಾಮಿಕ ರೋಗವು ಭಾರತೀಯ ಆರ್ಥಿಕತೆಯ ಮೇಲೆ ಉಂಟಾಗುವ ಪರಿಣಾಮವನ್ನು ತಗ್ಗಿಸಲು ಕೋವಿಡ-19 ಆರ್ಥಿಕ ಪ್ರತಿಕ್ರಿಯೆ ಕಾರ್ಯಪಡೆಯಲ್ಲಿ ಹಣಕಾಸು ಸಚಿವರು ತೊಡಗಿಸಿಕೊಂಡಿದ್ದಾರೆ. ಕೊರೊನಾ ವೈರಸ್ಗೂ ಮುನ್ನ ದೇಶಿ ಆರ್ಥಿಕತೆ ಕಠಿಣ ಸವಾಲುಗಳ ಮಧ್ಯೆ ಸಿಲುಕಿತ್ತು. ಅದನ್ನು ಮೇಲೆತ್ತುವ ಸವಾಲನ್ನು ಸಹ ಸೀತಾರಾಮನ್ ಎದುರಿಸಿದ್ದರು.
ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ವ್ಯವಹಾರಗಳು ತೀವ್ರವಾಗಿ ನಷ್ಟ ಅನುಭವಿಸುತ್ತಿವೆ. ಉದ್ಯಮಗಳ ಚೇತರಿಕೆಗೆ ಬಹು ನಿರೀಕ್ಷಿತ ಪ್ರಚೋದಕ ಪ್ಯಾಕೇಜ್ ತಯಾರಿಕೆಯ ಹೊಣೆಯನ್ನು ಸಹ ಸೀತಾರಾಮನ್ ಹೊತ್ತುಕೊಂಡಿದ್ದಾರೆ. ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ ಅಡಿ ಬಡ ಮತ್ತು ವಲಸೆ ಕಾರ್ಮಿಕರಿಗೆ 1.7 ಲಕ್ಷ ಕೋಟಿ ರೂ.ಗಳ ಆರ್ಥಿಕ ಪರಿಹಾರ ಪ್ಯಾಕೇಜ್‌ನ ಸಚಿವರು ಈಗಾಗಲೇ ಘೋಷಿಸಿದ್ದಾರೆ. ಈ ಯೋಜನೆಯಡಿ 31.77 ಕೋಟಿ ಫಲಾನುಭವಿಗಳಿಗೆ ಏಪ್ರಿಲ್ 10ರವರೆಗೆ ಕೇಂದ್ರವು 28,256 ಕೋಟಿ ರೂ. ಪಾವತಿಸಲಿದೆ.