ಬೆಂಗಳೂರು:ಗಾಂಧಿವಾದಿ, ರಂಗಕರ್ಮಿ ಪ್ರಸನ್ನ ಅವರು ದೇಶಾದ್ಯಂತ 'ಪವಿತ್ರ ಆರ್ಥಿಕತೆ'ಯನ್ನು ಜಾರಿಗೆ ತರಬೇಕು. ಆಧುನಿಕ ರಾಕ್ಷಸ ಗುಣದ ಆರ್ಥಿಕತೆಯ ಮುಂದೆ ಪರಿಸರ ಸ್ನೇಹಿ, ನೆಲಮೂಲದ ಆರ್ಥಿಕತೆ ಮಂಡಿಯೂರಿದೆ ಎಂದು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಜಾಗತಿಕ ಆರ್ಥಿಕತೆಯ ಕುಸಿತ, ಮಂದಗತಿಯ ದೇಶಿಯ ಹಣಕಾಸು ಚಟುವಟಿಕೆಗಳು, ಉದ್ಯೋಗ ಕುಸಿತ, ವಾಹನ ಮಾರಾಟ ಇಳಿಕೆ, ಬಡ್ಡಿದರ ಕಡಿತದ ಬಳಿಕ ನಮ್ಮ ಈಗಿನ ಆರ್ಥಿಕತೆಯನ್ನು ಬದಿಗಿಟ್ಟು ಸಾಂಪ್ರದಾಯಿಕ ವೃತ್ತಿ ಆಧಾರಿತ ಆರ್ಥಿಕತೆಗೆ ಮರಳುಬೇಕೆ ಎಂಬ ಕೂಗ ಸಣ್ಣದಾಗಿ ಧ್ವನಿಸುತ್ತಿದೆ. ಇದಕ್ಕೆ ಬಹುತೇಕ ಗಾಂಧಿವಾದಿಗಳು ಬಲ ತುಂಬುತ್ತಿದ್ದಾರೆ. ಪ್ರಸನ್ನ ಅವರು ನಡೆಸುತ್ತಿರುವ 'ಪವಿತ್ರ ಆರ್ಥಿಕತೆ' ಎಂದರೆ ಏನು ಎಂಬುದರ ವಿವರವಿದು.
'ಪವಿತ್ರ ಆರ್ಥಿಕತೆ' ಎಂದರೆ, ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೂಡಿಕೆ ಮಾಡಿ ಹೆಚ್ಚು ಜನರಿಗೆ ಉದ್ಯೋಗ ಅವಕಾಶ ಕೊಡುವುದು. ಇದು ಕಡಿಮೆ ಬಂಡವಾಳ ಮತ್ತು ಕಡಿಮೆ ವ್ಯಾಪ್ತಿಯ ಪರಿಸರ ಎನ್ನಬಹುದು. ಇನ್ನೂ ಸರಳವಾಗಿ ಹೇಳುವುದಾದರೇ ನಮ್ಮ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗದಂತೆ ಮಾನವನಿಗೂ ಹಾನಿಯಾಗದ ಮಾದರಿ ಆರ್ಥಿಕ ಚಟುವಟಿಕೆ. ಪ್ರಸ್ತುತ ನಮ್ಮ ಆರ್ಥಿಕತೆ ಬೇಡಿಕೆ ಮತ್ತು ಪೂರೈಕೆ ಮೇಲೆ ನಿಂತಿದೆ. ಆ ಪದ್ಧತಿಯನ್ನೇ ಪ್ರಸನ್ನ ಅವರು ವಿರೋಧಿಸುತ್ತಿದ್ದು, ಆರ್ಥಿಕತೆಯು ಅಗತ್ಯತೆ ಹಾಗೂ ಲಭ್ಯತೆ ಮೇಲೆ ಗಟ್ಟಿಯಾಗಿ ನಿಲ್ಲಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.
ಉದಾಹರಣೆಗೆ: 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಿಂದ ಹಿಡಿದು ಅದನ್ನು ಅಂತಿಮ ಅನುಭೋಗಿಗಳಿಗೆ ತಲುಪುವವರಿಗೆ ನಾಟಿ, ಕಳೆ ತೆಗೆವುದು, ರಾಸಾಯನ ಸಿಂಪರಣೆ ಬದಲು ಸಾಂಪ್ರದಾಯಕ ಬೇವಿನ ಸೊಪ್ಪಿನಂತಹ ಮಿಶ್ರಣ, ಫಸಲು ಕಟಾವು, ಬತ್ತ ಸಂಸ್ಕರಣೆ, ಪ್ಯಾಕೆಜ್, ಸಾಗಾಟ, ಮಾರಾಟದಂತಹ ಸರಪಳಿ ಪ್ರಕ್ರಿಯೆಯಲ್ಲಿ ಯಂತ್ರಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪ್ರಾಣಿ ಮತ್ತು ಮಾನವ ಸಂಪನ್ಮೂಲದ ಶಕ್ತಿಯನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು.